ಕುಶಾಲನಗರ, ಜು. 14: ಕೊರೊನಾ ವೈರಸ್ ಸೋಂಕು ವಾಣಿಜ್ಯ ನಗರಿ ಕುಶಾಲನಗರದಲ್ಲಿ ಕಳೆದ ಎರಡು ವಾರದಿಂದ ವಿವಿಧೆಡೆ ಹಬ್ಬುತ್ತಿರುವ ಶಂಕೆ ವ್ಯಕ್ತಗೊಂಡಿದ್ದು ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ. ಎರಡು ವಾರಗಳ ಹಿಂದೆ ಕುಶಾಲನಗರ ಪಟ್ಟಣದ ಹೃದಯ ಭಾಗದ ರಥಬೀದಿಯಲ್ಲಿ ಔಷಧಿ ಅಂಗಡಿ ವರ್ತಕರೊಬ್ಬರಿಗೆ ಸೋಂಕು ದೃಢಪಟ್ಟ ಬೆನ್ನಲ್ಲೇ ಪಟ್ಟಣದ ಜನತೆ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಸೋಂಕು ತಡೆಯಲಾಗುತ್ತಿಲ್ಲ.

ಸೋಂಕಿತ ಪ್ರದೇಶವನ್ನು ನಿರ್ಬಂಧಿತ ವಲಯವನ್ನಾಗಿ ಮಾಡಿದರೂ ಸುತ್ತಮುತ್ತಲ ಬಡಾವಣೆಗಳಲ್ಲಿ ಅಲ್ಲಲ್ಲಿ ಬೆರಳೆಣಿಕೆಯ ಸೋಂಕು ದೃಢಪಡುತ್ತಿರುವ ಬೆನ್ನಲ್ಲೇ ಕುಶಾಲನಗರದ ದಂಡಿನಪೇಟೆ ಮತ್ತು ರಥಬೀದಿಯ ಇಬ್ಬರು ವಯೋವೃದ್ಧರು ಸೋಂಕು ತಗುಲಿ ಮೃತಪಟ್ಟಿರುವ ಪ್ರಕರಣಗಳು ವರದಿಯಾಗಿವೆ. ಓರ್ವ ವ್ಯಕ್ತಿ ಬೆಂಗಳೂರಿನಿಂದ ಬಂದು ಕುಶಾಲನಗರದ ದಂಡಿನಪೇಟೆಯಲ್ಲಿ ನೆಲೆಸಿದ್ದ ಸಂದರ್ಭ ಕೊರೊನಾ ವೈರಸ್ ಸೋಂಕು ತಗುಲಿ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟರೆ ಇನ್ನೊಬ್ಬರು ಕುಶಾಲನಗರದ ರಥಬೀದಿಯ ನಿವಾಸಿ ಮೈಸೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಅವರಿಗೂ ಕೋವಿಡ್ ಸೋಂಕು ತಗುಲಿದ ಬಗ್ಗೆ ವರದಿಯಾಗಿದೆ ಎಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ಶಕ್ತಿಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದೀಗ ದಂಡಿನಪೇಟೆಯ ಮೃತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ 8 ಮಂದಿಗೆ ಪಾಸಿಟಿವ್ ವರದಿಯಾಗಿದ್ದು ಮೃತ ವ್ಯಕ್ತಿ ಸೋಂಕು ತಗುಲಿದ ಸಂದರ್ಭ ಕುಶಾಲನಗರ ಮತ್ತು ಕೊಪ್ಪ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ತೆರಳಿರುವ ಬಗ್ಗೆ ಕೂಡ ಮಾಹಿತಿಗಳು ಹೊರಬಿದ್ದಿವೆ. ಇನ್ನೊಂದೆಡೆ ಕುಶಾಲನಗರದ ಶಿವರಾಂ ಕಾರಂತ್ ಬಡಾವಣೆ, ಬೈಚನಹಳ್ಳಿ, ಬಲಮುರಿ ದೇವಾಲಯ ವ್ಯಾಪ್ತಿ ಜೊತೆಗೆ ದಂಡಿನಪೇಟೆ ಬಡಾವಣೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಸೋಂಕು ಕಂಡುಬಂದಿದ್ದು ಇಡೀ ಪಟ್ಟಣದ ಜನತೆ ವ್ಯಾಪಾರ ವಹಿವಾಟಿಗೆ ಓಡಾಡಲು ಕೂಡ ಆತಂಕ ವ್ಯಕ್ತಪಡಿಸುತ್ತಿರುವ ಮಾಹಿತಿಗಳು ಕೇಳಿಬಂದಿವೆ.

ಆರೋಗ್ಯ, ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಎಲ್ಲಾ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಕೆಲ ಜನರು ಇದಕ್ಕೆ ತಲೆ ಕೆಡಿಸಿಕೊಳ್ಳದೆ ಓಡಾಡುತ್ತಿರುವುದು ಈ ಎಲ್ಲಾ ಅವಾಂತರಗಳಿಗೆ ಕಾರಣವಾಗುತ್ತಿದೆ. ಸಂಡೆ ಕಫ್ರ್ಯು ಅವಧಿಯಲ್ಲಿ ಮಾಂಸ ಮತ್ತಿತರ ಅಂಗಡಿಗಳಲ್ಲಿ ತಾಮುಂದು ನಾಮುಂದು ಎಂದು ಮೈಮೇಲೆ ಬಿದ್ದು ವಹಿವಾಟಿನಲ್ಲಿ ಗ್ರಾಹಕರು ಬೀಳುತ್ತಿದ್ದುದು ಗಮನಾರ್ಹ. ಮದ್ಯದಂಗಡಿ, ಹೊಟೇಲ್‍ಗಳಲ್ಲಿ ಕೂಡ ಜನ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ತಮ್ಮಿಷ್ಟದಂತೆ ಓಡಾಟ ಮಾಡುತ್ತಿರುವುದು ಕೂಡ ಇತ್ತೀಚಿನ ಬೆಳವಣಿಗೆಯಾಗಿದೆ.

ಕುಶಾಲನಗರ ಪಟ್ಟಣ ಸೇರಿದಂತೆ ಎಲ್ಲೆಡೆ ದಾರಿ ಬದಿಯಲ್ಲಿ ತರಕಾರಿ ಅಂಗಡಿಗಳು ತಲೆ ಎತ್ತುತ್ತಿದ್ದು ಸೋಂಕು ತಗುಲಿದ ಪ್ರದೇಶದಿಂದ ಹೊರಬಂದು ಅಲ್ಲಲ್ಲಿ ವ್ಯಾಪಾರ ಮಾಡುತ್ತಿರುವರ ಬಗ್ಗೆ ಕೂಡಾ ಆತಂಕಗೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ಆಡಳಿತಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳದಿದ್ದಲ್ಲಿ ಹೆಚ್ಚಿನ ಅನಾಹುತಗಳು ನಡೆಯುವ ಸಾಧ್ಯತೆ ಇದೆ ಎನ್ನುವುದು ಜನಾಭಿಪ್ರಾಯವಾಗಿದೆ. ಒಟ್ಟಾರೆ ಕೊರೊನಾ ವೈರಸ್ ಸೋಂಕಿನಿಂದ ಪಾರಾಗಲು ಮತ್ತೆ ಲಾಕ್‍ಡೌನ್ ಅವಶ್ಯಕತೆ ಇದೆ ಎನ್ನುತ್ತಾರೆ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾಗಿರುವ ಬಿ.ಅಮೃತ್‍ರಾಜ್. - ಚಂದ್ರಮೋಹನ್