ಗೋಣಿಕೊಪ್ಪ ವರದಿ, ಜು. 14: ರೂ. 6.73 ಕೋಟಿ ವೆಚ್ಚದಲ್ಲಿ ಬೊಳ್ಳೇರಗೇಟ್-ಕಾಕೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪೇರ್ಮಾಡ್ ಈಶ್ವರ ದೇವಸ್ಥಾನ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ತಾ. 13 ರಂದು ಗ್ರಾಮಸ್ಥರಿಂದಲೇ ಭೂಮಿಪೂಜೆ ನೆರವೇರಿತು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಸುಮಾರು 7 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಪೂಜೆ ನಡೆಯಿತು. ಈ ಸಂದರ್ಭ ಗ್ರಾಮದ ಪ್ರಮುಖರಾದ ಪೆಮ್ಮಣಮಾಡ ರಮೇಶ್, ನವೀನ್, ಬೊಳ್ಳೇರ ವಿನಯ್, ರವಿ, ಕಳ್ಳಂಗಡ ರಜಿ ಇತರರು ಪಾಲ್ಗೊಂಡರು.

ಈ ಬಗ್ಗೆ ಗ್ರಾಮದ ಹಿರಿಯರಾದ ಪೆಮ್ಮಣಮಾಡ ರಮೇಶ್ ಮಾಹಿತಿ ನೀಡಿ, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ ಹಾಗೂ ಬಿಜೆಪಿ ವೀರಾಜಪೇಟೆ ಮಂಡಲದ ಮಾಜಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಮುಖಂಡ ಮಲ್ಲಂಡ ಮಧು ಇವರುಗಳ ಕಾಳಜಿಯಿಂದ ಹಣ ಬಿಡುಗಡೆಯಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಭೂಮಿಪೂಜೆಯಿಂದ ಅವರುಗಳು ದೂರ ಉಳಿದಿದ್ದಾರೆ. ಅವರ ಮಾರ್ಗದರ್ಶನದಂತೆ ಪೂಜೆ ನೆರವೇರಿಸಲಾಗಿದೆ. ಶೀಘ್ರವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿಸುವ ಭರವಸೆಯನ್ನು ಗುತ್ತಿಗೆದಾರ ರಾಜೀವ್ ಶೆಟ್ಟಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.