ಸೋಮವಾರಪೇಟೆ, ಜು. 14: ಪ್ರಸ್ತುತ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿದ್ದು, ಆರೋಗ್ಯವಂತ ವ್ಯಕ್ತಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾ ರಕ್ತನಿಧಿ ಘಟಕದ ಕರುಂಬಯ್ಯ ಅವರು ಅಭಿಪ್ರಾಯಿಸಿದರು.

ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಯೋಧಾಭಿಮಾನಿ ಬಳಗ-ಹಾನಗಲ್ಲು ಬಾಣೆ ಇವುಗಳ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಉಚಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಿದೆ. ರೋಗಿಗಳಿಗೆ ಅವಶ್ಯಕ ರಕ್ತವನ್ನು ಪೂರೈಸಲೂ ಸಹ ಕೆಲವೊಮ್ಮೆ ಕಷ್ಟಸಾಧ್ಯವಾಗುವ ಸನ್ನಿವೇಶ ನಿರ್ಮಾಣವಾಗುತ್ತಿದೆ. ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಕ್ತದಾನಕ್ಕಾಗಿ ನಮ್ಮೊಂದಿಗೆ ಕೈಜೋಡಿಸುತ್ತಿದ್ದು, ಇನ್ನೂ ಹೆಚ್ಚಿನ ಸ್ಪಂದನೆಯ ಅಗತ್ಯವಿದೆ. ರಕ್ತದ ಅವಶ್ಯಕತೆ ಇರುವ ರೋಗಿಗಳು ಹೆಚ್ಚಿದ್ದು, ಬೇಡಿಕೆಗೆ ತಕ್ಕಂತೆ ರಕ್ತ ಪೂರೈಸಬೇಕಾದರೆ ದಾನಿಗಳ ನೆರವು ಅಗತ್ಯವಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಮಾತನಾಡಿ, ಕೊರೊನಾ ವೈರಸ್ ಆತಂಕದ ಸಂದರ್ಭದಲ್ಲೂ ಸಾಮಾಜಿಕ ಕಳಕಳಿಯೊಂದಿಗೆ ರಕ್ತದಾನ ಮಾಡುತ್ತಿರುವದು ಶ್ಲಾಘನೀಯ. ಆರೋಗ್ಯವಂತ ವ್ಯಕ್ತಿಗಳು ನಿಯಮಿತವಾಗಿ ರಕ್ತದಾನ ಮಾಡಬೇಕು. ಇಂತಹ ಶಿಬಿರಗಳು ಹೆಚ್ಚು ನಡೆಯಬೇಕು ಎಂದು ಆಶಿಸಿದರು.

ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿ, ಕಾರ್ಗಿಲ್ ವಿಜಯೋತ್ಸವ ಮತ್ತು ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರಿಗೆ ಶ್ರದ್ದಾಂಜಲಿ ಸಲ್ಲಿಸುವ ಸಲುವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಶಿಬಿರದಲ್ಲಿ ಒಟ್ಟು 46 ಮಂದಿ ಭಾಗವಹಿಸಿ ರಕ್ತದಾನ ಮಾಡಿದರು. ಈ ಸಂದರ್ಭ ಯೋಧಾಭಿಮಾನಿ ಬಳಗದ ಕೃಷ್ಣ, ಶಿವಕುಮಾರ್, ಗುರುಪ್ರಸಾದ್ ಸೇರಿದಂತೆ ರಕ್ತನಿಧಿ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.