ಮಡಿಕೇರಿ, ಜು.14: ಸರಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ದಿಂದ ಲಾಕ್‍ಡೌನ್ ಅನ್ನು ಸೀಮಿತ ಅವಧಿಯೊಂದಿಗೆ ಮತ್ತೆ ಭಾಗಶಃ ಜಾರಿಗೊಳಿಸಲಾಗಿದೆ. ಬೆಂಗಳೂರಿನಲ್ಲಿ 1 ವಾರ ಕಾಲ ಪೂರ್ಣ ಪ್ರಮಾಣ ದಲ್ಲಿ ಲಾಕ್‍ಡೌನ್ ಜಾರಿಗೊಳಿಸ ಲಾಗಿದೆ. ಆದರೆ, ಜಿಲ್ಲಾ ಮಟ್ಟಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಪರಿಸ್ಥಿತಿಗೆ ಪೂರಕವಾಗಿ ಜಾರಿ ಗೊಳಿಸುವಂತೆ ಸೂಚಿಸಲಾಗಿದೆ, ಇತರ ಜಿಲ್ಲೆಗಳಂತೆ ಕೊಡಗು ಜಿಲ್ಲ್ಲಾಧಿಕಾರಿಯವ ರೊಂದಿಗೂ ನಿನ್ನೆ ಸಂಜೆ ಮುಖ್ಯ ಮಂತ್ರಿಯವರು ವೀಡಿಯೋ ಸಂಭಾಷಣೆ ನಡೆಸಿದ್ದು ಆ ಬಳಿಕ ಜಿಲ್ಲಾಧಿಕಾರಿಯವರು ಈಗ ಭಾನುವಾರ ಅಸ್ತಿತ್ವದಲ್ಲಿರುವ ಕಫ್ರ್ಯೂ ಜೊತೆ ಶನಿವಾರಗಳಂದೂ ಕೂಡ ಜಾರಿಗೊಳಿಸಿದ್ದಾರೆ. ಅಲ್ಲದೆ ಸೋಮ ವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಯಿಂದ ಇದ್ದ ಕಫ್ರ್ಯೂವನ್ನು 2 ಗಂಟೆ ವಿಸ್ತರಿಸಿದ್ದು ಸಂಜೆ 6 ರಿಂದ ಬೆ.6 ರವರೆಗೆ ಜಾರಿಗೊಳಿಸಲಾಗಿದೆ. ಈ ನಡುವೆ ಕೊಡಗು ಜಿಲ್ಲೆಗೆ ವಾಪಸಾಗುವ ಬೇರೆ ಪ್ರದೇಶಗಳ ಜನರಿಗೆ ಸಂಪರ್ಕ ತಡೆಗಳನ್ನು ಜಿಲ್ಲಾಡಳಿತ ನಿರ್ದೇಶಿಸಿದ್ದರೂ ಸರಕಾರದ ಮಾರ್ಗಸೂಚಿಯಂತೆ ಅದು ಕಾನೂನಾತ್ಮಕವಾಗಿ ಕಡ್ಡಾಯ ವಾಗಿಲ್ಲ. ಗ್ರಾಮ, ಪಟ್ಟಣ ಮತ್ತು ನಗರ ಮಟ್ಟಗಳ ಟಾಸ್ಕ್ ಫೋರ್ಸ್‍ಗಳ ಹೆಗಲಿಗೆ ಹೊಣೆ ಹೊರಿಸಲಾಗಿದೆ. ಇದರಿಂದಾಗಿ ಕೊಡಗು ಜಿಲ್ಲೆಗೆ ಹೊರಗಿನಿಂದ ಬರುವವರ ನಿಯಂತ್ರಣ ಸಾಧ್ಯ ವಾಗಿಲ್ಲ ಎನ್ನುವದು “ಶಕ್ತಿ”ಗೆ ಕಂಡು ಬಂದ ವಿದ್ಯಮಾನ. ಜಿಲ್ಲೆಯ ಒಳಗೆ ನಿರ್ಬಂಧಗಳನ್ನು ಬಿಗಿಗೊಳಿಸ ಲಾಗಿದ್ದರೂ ಹೊರಗಿನಿಂದ ಬರುವವರ ಮೂಲಕ ಕೊರೊನಾ ಸೋಂಕು ಹಬ್ಬುವಿಕೆ ಯನ್ನು ತಡೆಯಲು ಸಾಧ್ಯವಿಲ್ಲವಾಗಿದೆ.

ಸರಕಾರ ಒಂದೆಡೆ ಈ ಹಿಂದೆ ಸಡಿಲಿಸಿದ್ದ ಲಾಕ್‍ಡೌನ್ ನಿರ್ಬಂಧ ಗಳನ್ನು ಮತ್ತೆ ಬಿಗಿಗೊಳಿಸಲು ಯತ್ನಿಸಿದೆ. ಆದರೆ, ಲಾಕ್‍ಡೌನ್ 3.0 ರ ಬಳಿಕ ಸರಕಾರ ಎಲ್ಲ ಗಡಿ ಪ್ರದೇಶಗಳ ದ್ವಾರಗಳಲ್ಲಿ ತಪಾಸಣೆ, ಪಾಸ್‍ಗಳ ಮೂಲಕ ಮಾತ್ರ ಪ್ರವೇಶ, ಆರೋಗ್ಯ ಪರೀಕ್ಷೆ, ಕೈಗೆ ಸ್ಟಾಂಪಿಂಗ್ ಹಾಗೂ

(ಮೊದಲ ಪುಟದಿಂದ) ಕಡ್ಡಾಯ-ಕಾನೂನಾತ್ಮಕ ಸಂಪರ್ಕ ತಡೆಗಳನ್ನು ಸಂಪೂರ್ಣ ಕೈ ಬಿಟ್ಟ ಬಳಿಕ ಎಲ್ಲಿಯೂ ನಿಯಂತ್ರಣವಿಲ್ಲ. ಜಿಲ್ಲೆಯಲ್ಲಿ ಕೇರಳದ ಮಾಕುಟ್ಟ, ಕುಟ್ಟ ಹಾಗೂ ಕರಿಕೆಗಳಲ್ಲಿ ಮಾತ್ರ ಗಡಿಯನ್ನು ಸಂಪೂರ್ಣ ಬಂದ್ ಮಾಡಿರುವದು ಮುಂದುವರಿದಿದೆ. ಆದರೆ, ಸಂಪಾಜೆ ಮತ್ತು ಕುಶಾಲನಗರ ತಪಾಸಣಾ ಕೇಂದ್ರಗಳಲ್ಲಿ ಯಾವದೇ ನಿರ್ಬಂಧಗಳಿಲ್ಲ. ಕೊಡಗಿನಲ್ಲಿ ಇದೀಗ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವದರಿಂದ ಕರಿಕೆ ಗೇಟ್‍ನಲ್ಲಿ ಕೇರಳ ಸರಕಾರವೇ ಕೊಡಗಿನ ಜನರು ಕೇರಳ ಪ್ರವೇಶಿಸದಂತೆ ಇದೀಗ ನಿರ್ಬಂಧ ವಿಧಿಸಿ ತಡೆ ಮಾಡಿದೆ. ಇದರಿಂದಾಗಿ ಅಗತ್ಯ ವಸ್ತುಗಳ ಖರೀದಿ ಮತ್ತಿತರ ಸಾಮಗ್ರಿಗಳಿಗಾಗಿ ಕರಿಕೆ ನಿವಾಸಿಗಳು ಈ ಹಿಂದೆ ಪಾಣತ್ತೂರಿಗೆ ಹೋಗುತ್ತಿದ್ದುದಕ್ಕೆ ತಡೆಯಾಗಿದೆ. ಅಲ್ಲ್ಲಿನ ನಿವಾಸಿಗಳು ಇದೀಗ ಭಾಗಮಂಡಲ ಮತ್ತು ಮಡಿಕೇರಿಗೆ ಬಂದು ಸಾಮಗ್ರ್ರಿಗಳನ್ನು ಖರೀದಿಸುತ್ತಿದ್ದಾರೆ.

ನಿನ್ನೆ ಸಂಜೆ ಮಡಿಕೇರಿ ನಗರಕ್ಕೆ ಮಂಗಳೂರು ಕಡೆಯಿಂದ ಅತ್ಯಧಿಕ ವಾಹನಗಳು ಬರುತ್ತಿದ್ದುದು ಗೋಚರವಾಯಿತು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೊರ ರಾಷ್ಟ್ರಗಳಿಂದ ಬಂದಿಳಿದ ಜನರೂ ಸೇರಿದಂತೆ ಮಡಿಕೇರಿಗೆ ಬಂದು ತಲುಪಿದವರ ಸಂಖ್ಯೆ ಹೆಚ್ಚಾಗಿದ್ದುದಾಗಿ ತಿಳಿದುಬಂದಿದೆ. ಆದರೆ, ಎಲ್ಲಿಯೂ ಇವರ ತಪಾಸಣೆಯಾಗಲಿ, ಗೃಹ ಸಂಪರ್ಕ ತಡೆಯಾಗಲೀ ಮಾಡುವವರಿರಲಿಲ್ಲ. ನಗರ ಸಭಾ ವ್ಯಾಪ್ತಿಯಲ್ಲಿ ನಗರ ಸಭಾ ಅಧಿಕಾರಿಗಳು, ರೆವಿನ್ಯೂ ಅಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತ ರಚನೆ ಮಾಡಿರುವ ಟಾಸ್ಕ್‍ಫೋರ್ಸ್ ಈ ಕಾರ್ಯ ನಡೆಸಬೇಕಾಗಿದೆ. ಏಕೆಂದರೆ, ಸಂಪಾಜೆ ಗೇಟ್‍ನಲ್ಲಿ ತಪಾಸಣೆ ಮಾಡುವ ಕಾರ್ಯವನ್ನು ಸರಕಾರದ ನೂತನ ಮಾರ್ಗ ಸೂಚಿಯನ್ವಯವೇ ಸ್ಥಗಿತಗೊಳಿಸಲಾಗಿದೆ. ಇದೀಗ ಕುಶಾಲನಗರದಿಂದಲೂ ಬೆಂಗಳೂರು - ಮೈಸೂರು ಮತ್ತೆಡೆಗಳಿಂದ ಅಧಿಕ ಸಂಖ್ಯೆಯಲ್ಲಿ ಜನ ಬರುತ್ತಾರೆ. ಅಲ್ಲ್ಲಿಯೂ ತಪಾಸಣೆಯಿಲ್ಲ. ಜಿಲ್ಲಾಡಳಿತದ ವರದಿ ಪ್ರಕಾರ ಬೆಂಗಳೂರಿನಿಂದ ಬಂದವರಲ್ಲಿ ಅಧಿಕ ಮಂದಿ ಕೋವಿಡ್ ಸೋಂಕಿಗೆ ಒಳಗಾದವರು ಕಂಡುಬಂದಿದ್ದಾರೆ. ಅಲ್ಲಿಂದ ಬಂದವರು ಸ್ವತಃ ಪರೀಕ್ಷೆ ಮಾಡಿಸಿಕೊಂಡಾಗ ಈ ಸೋಂಕು ಪತ್ತೆಯಾಗಿದೆ. ಆದರೆ, ಟಾಸ್ಕ್‍ಫೋರ್ಸ್ ಈ ಕೆಲಸ ನಿರ್ವಹಿಸುತ್ತಿರುವದು ಕಂಡುಬಂದಿಲ್ಲ. ಏಕೆಂದರೆ, ಸರಕಾರದ ನೂತನ ಮಾರ್ಗದರ್ಶಿ ಪ್ರಕಾರ ತಪಾಸಣೆ ಹಾಗೂ ಗೃಹಸಂಪರ್ಕ ತಡೆಗಳು ಕಡ್ಡಾಯವಾಗಿ ಉಳಿದಿಲ್ಲ; ಯಾವದೇ ಕಾನೂನಾತ್ಮಕ ನಿರ್ಬಂಧಗಳಿಲ್ಲ. ಅದೇ ರೀತಿ ಗ್ರಾಮ ಮಟ್ಟಗಳಲ್ಲಿಯೂ ಟಾಸ್ಕ್‍ಫೋರ್ಸ್‍ಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಗ್ರಾಮಗಳಿಗೆ ಹೊರ ಪ್ರದೇಶಗಳಿಂದ ಬಂದವರ ಕುರಿತು ಗಮನ ಹರಿಸುತ್ತಿಲ್ಲವೆನ್ನುವದು “ಶಕ್ತಿ” ಗೆ ತಿಳಿದುಬಂದ ವಿದ್ಯಮಾನ. ಜಿಲ್ಲಾಡಳಿತ ರಚಿಸಿರುವ ಟಾಸ್ಕ್‍ಫೋರ್ಸ್‍ಗಳು ಹೀಗಿವೆ: ಸ್ಥಳೀಯ ಕಾರ್ಯವ್ಯಾಪ್ತಿಯ ಪಟ್ಟಣ ಪಂಚಾಯ್ತಿ, ನಗರ ಸಭೆ, ಆರೋಗ್ಯ ಇಲಾಖೆ, ಪೆÇಲೀಸ್ ಇಲಾಖೆ ಸಹಿತದ ಟಾಸ್ಕ್‍ಫೋರ್ಸ್‍ಗಳು; ಅಲ್ಲದೆ, ಆಯಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಲ್ಲಿನ ಆಡಳಿತಾಧಿಕಾರಿ ನೇತೃತ್ವದಲ್ಲಿ ರಚಿತವಾಗಿರುವ ಗ್ರಾಮ ಮಟ್ಟದ ಟಾಸ್ಕ್ ಫೆÇೀರ್ಸ್ ಸಮಿತಿಗಳು. ಜಿಲ್ಲಾಧಿಕಾರಿಯವರು ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ ಈ ಸಮಿತಿಗಳು ಹೊರ ಪ್ರದೇಶಗಳಿಂದ ಬಂದವರ ಕುರಿತು ನಿಗಾ ವಹಿಸಿ ಗೃಹ ಸಂಪರ್ಕ ತಡೆಗೆ ಒಳಪಡಿಸುವಂತೆ ನಿರ್ದೇಶಿಸಿದ್ದರು. ಸಾರ್ವಜನಿಕರು ಕೂಡ ಜಾಗೃತರಾಗಿದ್ದು ಆಯಾ ಪ್ರದೇಶಗಳ ಟಾಸ್ಕ್ ಫೆÇೀರ್ಸ್ ಸಮಿತಿಗಳಿಗೆ ಮಾಹಿತಿ ನೀಡಲು ಕೋರಿದ್ದರು.

ಜಿಲ್ಲಾಧಿಕಾರಿಯವರ ಆದೇಶದ ಅನ್ವಯ : ವಿದೇಶದಿಂದ ಆಗಮಿಸಿದವರು ಕಡ್ಡಾಯವಾಗಿ 7 ದಿನಗಳ ಸಾಂಸ್ಥಿಕ ತಡೆ ಮತ್ತು ನಂತರದ 7 ದಿನಗಳು ಗೃಹ ಸಂಪರ್ಕ ತಡೆಯಲ್ಲಿ ಇರತಕ್ಕದ್ದು. ಹೊರ ರಾಜ್ಯದಿಂದ ಆಗಮಿಸಿದವರು ಕಡ್ಡಾಯವಾಗಿ 14 ದಿನಗಳ ಕಾಲ ಗೃಹ ಸಂಪರ್ಕ ತಡೆಯಲ್ಲಿ ಇರತಕ್ಕದ್ದು. ಹೊರ ಜಿಲ್ಲೆಗಳಿಂದ ಆಗಮಿಸಿದವರು ಕಡ್ಡಾಯವಾಗಿ 7 ದಿನಗಳ ಕಾಲ ಗೃಹ ಸಂಪರ್ಕ ತಡೆಯಲ್ಲಿ ಇರತಕ್ಕದ್ದು. ಈ ರೀತಿಯಾಗಿ ಸಂಪರ್ಕ ತಡೆಯಲ್ಲಿ ಇರುವವರಿಗೆ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಸ್ಥಳೀಯ ಕಾರ್ಯ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರದಿ ಮಾಡಿಕೊಳ್ಳುವುದು ಎಂದು ಸೂಚಿಸಲಾಗಿತ್ತು. ಆದರೆ, ಇದಕ್ಕೆ ಕಾನೂನಾತ್ಮಕ ಲೇಪನವಿಲ್ಲದಿರುವದರಿಂದÀ, ಕಡ್ಡಾಯವಾಗಿಲ್ಲದಿರುವದರಿಂದ ಪಾಲನೆಯಾಗುತ್ತಿಲ್ಲ ಎನ್ನುವದು “ಶಕ್ತಿ”ಗೆ ಗೊತ್ತಾದ ವಿಷಯ.

ಅಧಿಕಾರಿಗಳ ಅನಿಸಿಕೆ

ಈ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು “ಶಕ್ತಿ” ಪ್ರಶ್ನಿಸಿದಾಗ “ಟಾಸ್ಕ್ ಫೋರ್ಸ್” ಗಳು ಈ ಕೆಲಸ ಮಾಡಬೇಕಿದೆ. ಈ ಕುರಿತು ಮಾಹಿತಿಗಳನ್ನು ನೀಡಲಾಗಿದೆ. ಆಯಾ ವಿಭಾಗದ ಟಾಸ್ಕ್ ಫೋರ್ಸ್ ಸಮಿತಿಗಳು ಜಿಲ್ಲೆಯ ಜನರ ಹಿತದೃಷ್ಟಿಯಿಂದ ಕಾರ್ಯೋನ್ಮುಖವಾಗಲಿ” ಎಂದು ಆಶಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು “ಶಕ್ತ್ತಿ”ಯೊಂದಿಗೆ ಪ್ರತಿಕ್ರಿಯಿಸಿ ಮಾರ್ಗಸೂಚಿಯನ್ವಯ ತಪಾಸಣೆ ಸ್ಥಗಿತಗೊಂಡಿದ್ದರೂ ಮುಂದಿನ ದಿನಗಳಲ್ಲಿ ಕುಶಾಲನಗರ ಹಾಗೂ ಸಂಪಾಜೆ ಗಡಿ ಪ್ರದೇಶಗಳಲ್ಲಿ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗುತ್ತದೆ ಎಂದು ತಿಳಿಸಿದರು.

ಮಡಿಕೇರಿ ತಾಲೂಕು ಪಂಚಾಯ್ತಿಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿ ಅವರು “ಶಕ್ತಿ”ಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ:-“ಹೊರ ಪ್ರದೇಶಗಳಿಂದ ಜಿಲ್ಲೆಗೆ ಹಿಂತಿರುಗುವವರು, ಆಗಮಿಸುವವರು ಅವರ ಸ್ವಂತÀ ಆರೋಗ್ಯ ರಕ್ಷಣೆಯ ಸಲುವಾಗಿಯೂ, ಜೊತೆಗೆ ಜಿಲ್ಲೆಯ ಜನರ ಹಿತದೃಷ್ಟಿಯಿಂದಲೂ ಗೃಹ ಸಂಪರ್ಕ ತಡೆಯಲ್ಲಿದ್ದು ಸಹಕರಿಸಲಿ, ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಿ.”

-“ಚಕ್ರವರ್ತಿ”