ಕುಶಾಲನಗರ, ಜು. 14: ಕುಶಾಲನಗರ ಪಟ್ಟಣದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಲ್ಲಿ ವಾಹನ ಸವಾರರಿಗೆ ದಂಡ ವಿಧಿಸಲು ಸ್ಥಳೀಯ ಪೊಲೀಸರು ಹೊಸ ಮಾರ್ಗ ಕಂಡು ಹಿಡಿದಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುವುದು, ಏಕಮುಖ ರಸ್ತೆಯಲ್ಲಿ ಓಡಾಟ ಮಾಡುವುದು, ನೋ ಪಾರ್ಕಿಂಗ್‍ನಲ್ಲಿ ವಾಹನ ನಿಲುಗಡೆ ಸೇರಿದಂತೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಸವಾರರಿಗೆ ಸ್ಥಳದಲ್ಲೇ ದಂಡ ವಿಧಿಸುವ ಕ್ರಮದ ಬದಲು ಅಂತಹ ವಾಹನಗಳ ಛಾಯಾಚಿತ್ರಗಳನ್ನು ತೆಗೆದು ಠಾಣೆಗೆ ಕಳುಹಿಸುವ ಮೂಲಕ ಅಲ್ಲಿ ವಾಹನಗಳ ದಾಖಲೆಗಳನ್ನು ಸಂಗ್ರಹಿಸಿ ವಾಹನ ಮಾಲೀಕರಿಗೆ ಮಾಹಿತಿ ನೀಡಿ ದಂಡ ವಸೂಲಾತಿಗೆ ಚಿಂತನೆ ಹರಿಸಿದ್ದಾರೆ. ನಂತರದ ದಿನಗಳಲ್ಲಿ ವಾಹನ ಮಾಲೀಕರಿಗೆ ನೋಟೀಸ್ ಕಳುಹಿಸುವ ಕಾರ್ಯವೂ ನಡೆಯಲಿದೆ ಎಂದಿದ್ದಾರೆ.

ಕುಶಾಲನಗರ ಪಟ್ಟಣದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ದಿನೇ ದಿನೇ ಅಧಿಕಗೊಳ್ಳುತ್ತಿದ್ದು ಈ ಹಿನ್ನೆಲೆ ಈ ಕ್ರಮವನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ ಎಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ತಿಳಿಸಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ಮೂವರು ಸಂಚರಿಸುವುದು ಹಾಗೂ ಇನ್ನಿತರ ಸಂಚಾರಿ ನಿಯಮ ಉಲ್ಲಂಘನೆಯನ್ನು ಇದುವರೆಗೆ ಸ್ಥಳದಲ್ಲೇ ದಂಡ ವಿಧಿಸುವ ಮೂಲಕ ಕ್ರಮ ಕೈಗೊಳ್ಳಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಸಂಚಾರಿ ಪೊಲೀಸರು ವಾಹನಗಳ ಛಾಯಾಚಿತ್ರ ಪಡೆಯುವ ಮತ್ತು ಸಿಸಿ ಕ್ಯಾಮರಗಳ ಮೂಲಕ ದಾಖಲೆ ಸಂಗ್ರಹಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.