ಸುಂಟಿಕೊಪ್ಪ, ಜು. 13: ಸುಂಟಿಕೊಪ್ಪದ ಅಪ್ಪಾರಂಡ ಬಡಾವಣೆಯನ್ನು ನಿರ್ಬಂಧಿತ ಪ್ರದೇಶವೆಂದು ಘೋಷಣೆ ಮಾಡಿ ಸೀಲ್‍ಡೌನ್ ಮಾಡಿದ್ದರೂ ಅಲ್ಲಿನ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದ ವ್ಯಾಪಾರಿಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ತರಾಟೆಗೆ ತೆಗೆದುಕೊಂಡರು.

ಪಟ್ಟಣದ 2ನೇ ವಿಭಾಗದ ಬಾಲಕಿಯೋರ್ವಳಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಇದರಿಂದ ಬಡಾವಣೆಯನ್ನು ನಿಯಂತ್ರಿತ ವಲಯವೆಂದು ಘೋಷಿಸಿ ಸೀಲ್‍ಡೌನ್‍ಗೊಳಿಸಿ ಇಲ್ಲಿನ ನಿವಾಸಿಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಈ ಬಡಾವಣೆಯಲ್ಲಿ ಹಣ್ಣು, ತರಕಾರಿ ಹಾಗೂ ಮಾಂಸಗಳನ್ನು ಮಾರಾಟಗಾರರು ನಿರ್ಬಂಧಿತ ಪ್ರದೇಶದಿಂದ ಹೊರ ಬಂದು ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಸಾರ್ವಜನಿಕರು ದೂರಿಕೊಂಡ ಮೇರೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಕೂಡಲೇ ಈ ಭಾಗದ ನಿವಾಸಿಗಳ ಅಂಗಡಿಗಳನ್ನು ಮುಚ್ಚಿಸಿದರು. ಯಾರೂ ನಿಯಂತ್ರಿತ ಪ್ರದೇಶದಿಂದ ಹೊರಬರಬಾರದು. ಅವಶ್ಯ ವಸ್ತುಗಳು ಬೇಕಾಗಿದ್ದಲ್ಲಿ ಕರೆ ಮಾಡಿದ್ದಲ್ಲಿ ವಸ್ತುಗಳನ್ನು ಪೂರೈಸುವುದಾಗಿ ಸೂಚಿಸಿದರು.

ನಿರ್ಬಂಧಿತ ಪ್ರದೇಶದ ಜನರು ಕಂಡು ಬಂದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್ಚರಿಸಿದರು.

ಸುಂಟಿಕೊಪ್ಪ ಪಟ್ಟಣದಲ್ಲಿ ಅನಧಿಕೃತವಾಗಿ ಬೀದಿ ಬದಿ ಹಾಗೂ ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ತರಕಾರಿ ಹಾಗೂ ಇನ್ನಿತರ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಗೆ ಪಂಚಾಯಿತಿ ವತಿಯಿಂದ ರೂ 2,000ವರೆಗೆ ದಂಡ ವಿಧಿಸಲಾಗಿದೆ.