ಪಿಡಿಒ ಸ್ಪಷ್ಟನೆ

*ಗೋಣಿಕೊಪ್ಪಲು, ಜು. 13 : ತಿತಿಮತಿ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮಧ್ಯಾಹ್ನವರೆಗೆ ಮಾತ್ರ ತೆರೆದು ವ್ಯಾಪಾರ ವಹಿವಾಟು ನಡೆಸಬೇಕು. ಬಳಿಕ ಸ್ಥಗಿತಗೊಳಿಸಬೇಕು ಎಂದು ಈಚಿಗೆ ಗ್ರಾಮ ಪಂಚಾಯಿತಿ ಹಂತದಲ್ಲಿ ತೆಗೆದುಕೊಂಡಿದ್ದ ತೀರ್ಮಾನವನ್ನು ಜಿಲ್ಲಾ ಪಂಚಾಯಿತಿ ಸಿಇಒ ಅವರ ಸೂಚನೆಯಂತೆ ಹಿಂದಕ್ಕೆ ಪಡೆಯಲಾಗಿದೆ ಎಂದು ತಿತಿಮತಿ ಪಿಡಿಒ ಮಮತಾ ಜಗದೀಶ್ ತಿಳಿಸಿದ್ದಾರೆ.

ಕೊರೊನಾ ಸೋಂಕು ಹರುಡುವ ಭೀತಿಯಲ್ಲಿ ಎರಡು ದಿನ ಮಾತ್ರ ಪಟ್ಟಣವನ್ನು ಸಾರ್ವಜನಿಕರ ಒತ್ತಾಯದ ಮೇರೆಗೆ ಬಂದ್ ಮಾಡಲಾಗಿತ್ತು. ಬಳಿಕ ಜು.30 ರವರೆಗೆ ಮಧ್ಯಾಹ್ನದ ವರೆಗೆ ಮಾತ್ರ ವಹಿವಾಟು ನಡೆಸಲು ಸೂಚಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳ ಆದೇಶವಿಲ್ಲದೆ ಗ್ರಾಮ ಪಂಚಾಯಿತಿ ಹಂತದಲ್ಲಿ ಈ ರೀತಿಯ ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂಬ ಮೇಲಧಿಕಾರಿಗಳ ಸೂಚನೆಯಂತೆ ನಡೆದುಕೊಳ್ಳಲಾಗುತ್ತಿದೆ. ಇದೀಗ ವ್ಯಾಪಾರ ವಹಿವಾಟು ಹಾಗೂ ಸಾರ್ವಜನಿಕರ ಓಡಾಟಕ್ಕೆ ಯಾವುದೇ ನಿರ್ಬಂಧ ವಿರುವುದಿಲ್ಲ ಎಂದು ತಿಳಿಸಿದರು.

ಸಾರ್ವಜನಿಕರ ಒತ್ತಾಯ : ತಿತಿಮತಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದನ್ನು ನಿಯಂತ್ರಿಸಲು ಸಾರ್ವಜನಿಕರ ಓಡಾಟವನ್ನು ಮೊದಲು ನಿಯಂತ್ರಿಸಬೇಕು. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.