ನಾಪೋಕ್ಲು, ಜು. 13: ಮುಂಬರುವ ಅಕ್ಟೋಬರ್, ನವೆಂಬರ್ ತಿಂಗಳುಗಳಲ್ಲಿ ಜಿಲ್ಲೆಗೆ ಹೊರಗಿನಿಂದ ತೋಟ ಕಾರ್ಮಿಕರು ಆಗಮಿಸಲಿದ್ದು, ಆ ಸಂದರ್ಭ ಕೊರೊನಾ ನಿಯಂತ್ರಣದಲ್ಲಿರಬೇಕಾಗಿದೆ, ಹಾಗಾಗಿ ಸರಕಾರ ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ನಾಪೋಕ್ಲುವಿನ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಪಾಂಡಂಡ ರಮೇಶ್, ಅಂಜಪರವಂಡ ಚೋಮಣಿ, ಕಾಳೆಯಂಡ ಸಾಬಾ ತಿಮ್ಮಯ್ಯ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಗಳು, ಕಾರ್ಮಿಕರು ಆಗಮಿಸಲು ತೊಂದರೆಯಾದಲ್ಲಿ, ಕಾಫಿ, ಕಾಳುಮೆಣಸು ಹಾಗೂ ಇತರ ಬೆಳೆಗಳು ತೋಟಗಳಲ್ಲೇ ಹಾಳಾಗಿ, ಸಾಲ ಮಾಡಿದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹಾ ಪರಿಸ್ಥಿತಿ ಎದುರಾಗಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಕಾರ್ಮಿಕರ ಅಗತ್ಯವಿದೆಯೇ ಹೊರತು ಅತಿಥಿಗಳದ್ದಲ್ಲವೆಂದು ಇವರುಗಳು ಹೋಂಸ್ಟೇ ಆರಂಭದ ವಿರುದ್ಧ ಪರೋಕ್ಷ ಅಭಿಪ್ರಾಯಪಟ್ಟಿದ್ದಾರೆ.