ಕೂಡಿಗೆ, ಜು. 14 : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಗೋ ಸದನ ಕೇಂದ್ರವನ್ನು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬಳಸಿಕೊಳ್ಳಲು ಹುದುಗೂರು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಹುದುಗೂರು ಗ್ರಾಮದ ಗೋ ಸದನದ ಹತ್ತಿರದಲ್ಲಿ ಪಶುಪಾಲನೆ ಇಲಾಖೆಯ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹಸು ಮತ್ತು ಕರುಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾದ ಪಶುವೈದ್ಯ ಅಸ್ಪತ್ರೆ ಇದೆ. ಅಲ್ಲದೆ ಹಸುಗಳನ್ನು ಸಲಹಲು ಹಿಂದಿನ ಕಾಲದ ಕೊಟ್ಟಿಗೆ ಸುಸಜ್ಜಿತವಾಗಿದೆ ಹಸುಗಳಿಗೆ ಬೇಕಾಗುವ ಹುಲ್ಲಿನ ವ್ಯವಸ್ಥೆಗೆ ಸಮಿಪದಲ್ಲಿ ಹುಲ್ಲುಗಾವಲು ಪ್ರದೇಶ ಇದೆ. ಹಾಗಾಗಿ ಈ ಭಾಗದಲ್ಲಿರುವ ಗೋ ಸದನವನ್ನು ಬಳಕೆಮಾಡಿಕೊಳ್ಳಬಹುದು ಎಂದು ಹುದುಗೂರು ಗ್ರಾಮದ ಗ್ರಾಮಸ್ಥರು ಸಭೆ ಸೇರಿ ತಿರ್ಮಾನಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.