ಶನಿವಾರಸಂತೆ, ಜು. 13: ಹೋಬಳಿಯಾದ್ಯಂತ ವಾರದಿಂದ ತುಂತುರು ಮಳೆಯ ಸಿಂಚನವಾಗುತ್ತಿದ್ದು, ಭೂಮಿ ಹದಗೊಂಡಿರುವ ಹಿನ್ನೆಲೆ ಕೃಷಿ ಕೆಲಸ ಚುರುಕುಗೊಂಡಿದೆ. ರೈತರು ಮುಂಗಾರು ಮಳೆ ಸಾಧಾರಣವಾಗಿದ್ದರೂ ಪ್ರತಿವರ್ಷದ ವಾಡಿಕೆಯಂತೆ ಭತ್ತ ಬೆಳೆಯಲು ಮುಂದಾಗಿದ್ದಾರೆ.

ಗ್ರಾಮಗಳಲ್ಲಿ ಕೊರೊನಾ ಭೀತಿಯ ಜತೆ ಮಳೆ ಕೊರತೆ ಉಂಟಾಗಿದ್ದರೂ ರೈತರು ಗದ್ದೆಗಳಲ್ಲಿ ಭತ್ತದ ಹುಡಿ ಅಗೆ ಹಾಕಿದ್ದು ಟ್ರ್ಯಾಕ್ಟರ್, ಟಿಲ್ಲರ್ ಮೂಲಕ ಉಳುಮೆ ಕೆಲಸದಲ್ಲಿ ತೊಡಗಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ 250 ಹೆಕ್ಟೇರ್ ಜಮೀನಿನಲ್ಲಿ ಭತ್ತ ಬೆಳೆಯುತ್ತಾರೆ. ಕೃಷಿ ಸಂಪರ್ಕ ಕೇಂದ್ರದಿಂದ ರೈತರು ಇಂಟಾನ್, ತುಂಗ, ಬಿಎನ್‍ಆರ್, ತನು ಇತ್ಯಾದಿ ವಿವಿಧ ತಳಿಯ 3 ತಿಂಗಳ ಅವಧಿಯ ಭಿತ್ತನೆ ಬೀಜ ಖರೀದಿಸಿ ಬಿತ್ತನೆ ಮಾಡುತ್ತಿದ್ದಾರೆ.

ಧಾರಾಕಾರವಾಗಿ ಸುರಿಯಬೇಕಾಗಿದ್ದ ಪುನರ್ವಸು ಮಳೆಯೂ ಬಿಡುವು ನೀಡುತ್ತಾ ತುಂತುರಾಗಿ ಸುರಿಯುತ್ತಿದೆ. ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈವರೆಗೆ 13-16 ಇಂಚು ಮಳೆಯಾಗಿದೆ. ಕಾಜೂರು, ಎಡೆಹಳ್ಳಿ, ದೊಡ್ಡಕೊಳತ್ತೂರು, ಕೂಜಗೇರಿ ಗ್ರಾಮಗಳಲ್ಲಿ 13 ಇಂಚು ಮಳೆಯಾಗಿದೆ. ಇನ್ನು ಹದಿನೈದು ದಿನಗಳಲ್ಲಿ ನಾಟಿ ಮಾಡಬಹುದಾಗಿದೆ.ಕೂಡಿಗೆ : ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಜಮೀನುಗಳಲ್ಲಿ ಸಸಿ ಮಡಿ ಬಿತ್ತನೆಯ ಕಾರ್ಯ ಪ್ರಾರಂಭ ಮಾಡಿದ್ದಾರೆ.ಹಾರಂಗಿ ಅಚ್ಚುಕಟ್ಟು ಪ್ರದೇಶಗಳಾದ ಹುದುಗೂರು, ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ 22 ಉಪ ಗ್ರಾಮಗಳು ಈ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿರುತ್ತವೆ. ಅಲ್ಲದೆ ಈ ವ್ಯಾಪ್ತಿಯ ರೈತರು ಭೂಮಿಯನ್ನು ಉಳುಮೆ ಮಾಡಿ ಬಿತ್ತನೆ ಬೀಜಕ್ಕೆ ಸಿದ್ಧ ಮಾಡಿರುತ್ತಾರೆ.