ಕುಶಾಲನಗರ, ಜು. 14: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕೆಲವು ಬಡಾವಣೆಗಳ 15ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ 7 ಕಡೆ ನಿರ್ಬಂಧಿತ ವಲಯ ಘೋಷಣೆ ಮಾಡಲಾಗಿದೆ. ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರ ನೇತೃತ್ವದಲ್ಲಿ ಕಂದಾಯ, ಆರೋಗ್ಯ ಮತ್ತು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ನಿರ್ಬಂಧಿತ ವಲಯ ನಿವಾಸಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಮುಂದಿನ ಆದೇಶ ತನಕ ಮನೆ ಬಿಟ್ಟು ಓಡಾಟ ನಡೆಸುವಂತಿಲ್ಲ ಎಂದು ಆದೇಶ ಮಾಡಿದ್ದಾರೆ.
ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ನಿರ್ಬಂಧಿತ ವಲಯವನ್ನಾಗಿ ಘೋಷಣೆ ಮಾಡಿದ್ದರೂ ಅಲ್ಲಿನ ವರ್ತಕರೊಬ್ಬರು ನಿಯಮ ಉಲ್ಲಂಘಿಸಿ ಕುಶಾಲನಗರ, ಮಡಿಕೇರಿ ರಸ್ತೆಯ ತಮ್ಮ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ ಬೆನ್ನಲ್ಲೇ ತಕ್ಷಣ ಪೊಲೀಸರು ಧಾವಿಸಿ ಅಂಗಡಿಯನ್ನು ಮುಚ್ಚಿಸಿ ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಈ ನಡುವೆ ಕುಶಾಲನಗರ ಪ.ಪಂ. ವತಿಯಿಂದ ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆ, ದಂಡಿನಪೇಟೆಯಲ್ಲಿ ಸಾನಿಟೈಸ್ ಮಾಡಲಾಯಿತು. ಪ.ಪಂ. ಮುಖ್ಯಾಧಿಕಾರಿ ಸುಜಯ್ಕುಮಾರ್ ನೇತೃತ್ವದಲ್ಲಿ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳಿಂದ ಸಾನಿಟೈಸಿಂಗ್ ಕಾರ್ಯ ನಡೆಯಿತು.