ಮಡಿಕೇರಿ, ಜು. 14: ಬೇಂಗೂರು ಪಂಚಾಯಿತಿ ವ್ಯಾಪ್ತಿಯ ಚೇರಂಬಾಣೆ ಗ್ರಾಮದಲ್ಲಿ ಕಂಟೈನ್‍ಮೆಂಟ್ ವಲಯದಲ್ಲಿ ಲಾಕ್‍ಡೌನ್ ನಿಯಮಬಾಹಿರವಾಗಿ ವ್ಯಾಪಾರ ನಡೆಸಿರುವ ಬಗ್ಗೆ ಬಂದ ಸಾರ್ವಜನಿಕ ದೂರಿನ ಆಧಾರದ ಮೇಲೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಸ್ಥಳ ಪರಿವೀಕ್ಷಣೆ ನಡೆಸಿ, ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕಾರ್ಯನಿರ್ವಾಹಕ ಅಧಿಕಾರಿಗೆ ವರದಿ ಸಲ್ಲಿಸಿದ್ದಾರೆ.
ಅದರಂತೆ ಕಾರ್ಯನಿರ್ವಾಹಣ ಅಧಿಕಾರಿ ಲಕ್ಷ್ಮಿ ಅವರು ಅಂಗಡಿಯನ್ನು 14 ದಿನಗಳ ಕಾಲ ಮುಚ್ಚುವಂತೆ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿ ಅಂಗಡಿಯನ್ನು ಸೀಲ್ ಮಾಡಲಾಗಿದೆ. ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಗಿದ್ದು, ಅಂಗಡಿ ಪರವಾನಗಿ ರದ್ದುಪಡಿಸಲಾಗಿದೆ. ಅಂಗಡಿಯಿಂದ ವಸ್ತುಗಳನ್ನು ಖರೀದಿಸಿದ ಕೆಲವರಿಗೆ ನಿಯಂತ್ರಿತ ಪ್ರದೇಶಕ್ಕೆ ಅನುಮತಿ ಇಲ್ಲದೆ ಪ್ರವೇಶ ಮಾಡಿದ್ದಕ್ಕಾಗಿ ನಿಯಮಾನುಸಾರ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದು, ಇವರು ಕೂಡ ಕಡ್ಡಾಯವಾಗಿ 14 ದಿನಗಳ ಕಾಲ ಗೃಹಸಂಪರ್ಕ ತಡೆಯಲ್ಲಿರುವಂತೆ ಕೈಗೆ ಸೀಲ್ ಹಾಕಲಾಗಿದೆ.