ಸುಂಟಿಕೊಪ್ಪ, ಜು. 12: ಸುಂಟಿಕೊಪ್ಪ ಹೋಬಳಿಯ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಬೊಳ್ಳೂರು ಗ್ರಾಮದ ಕುಟುಂಬವೊಂದರ ನಿಶ್ಚಿತಾರ್ಥ ದಿನಾಂಕ ಇದೇ 8ರಂದು ಏರ್ಪಡಿಸಲಾಗಿತ್ತು. ಗುಡ್ಡೆಹೊಸೂರಿನ ಬೊಳ್ಳೂರು ಗ್ರಾಮದ ನಿವಾಸಿಯೊಬ್ಬರು ತನ್ನ 2 ಮಕ್ಕಳೊಂದಿಗೆ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ ಇವರ ಪತ್ನಿ ದಿನಾಂಕ 3ರಂದು ಅನಾರೋಗ್ಯ ಕಾರಣ ದ್ರವ ಪರೀಕ್ಷೆ ಒಳಪಟ್ಟಿದ್ದು, ದಿನಾಂಕ 9ರಂದು ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ.
ಆದರೆ ಇವರ ಮನೆಯ ಇತರ ಸದಸ್ಯರಿಗೆ ಗಂಟಲ ದ್ರವ ಪರೀಕ್ಷೆ ನಡೆದಿಲ್ಲ್ಲ ಎಂದು ನಂತರ ತಿಳಿದು ಬಂದಿದೆ. ಇದರಿಂದ ಗಾಬರಿಗೊಂಡ ಗ್ರಾಮಸ್ಥರು ಆರೋಗ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ಈ ಮನೆಯ ಕುಟುಂಬಸ್ಥರನ್ನು ಈ ಭಾಗದ ಆಶಾ ಕಾರ್ಯಕರ್ತೆಯರು ಹೋಂ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಿದ್ದಾರೆ. ಈ ಭಾಗದ ಸುಮಾರು 25 ಮನೆಯವರು ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಈ ಗ್ರಾಮದ ಜನರು ಕೊರೊನಾ ಭಯದಿಂದ ದಿನ ದೂಡುವಂತಾಗಿದೆ. ಆದರೆ ಈ ಕಾರ್ಯಕ್ರಮ ನಡೆಯುವ ಮೊದಲು ಪಂಚಾಯಿತಿ ಗಮನಕ್ಕೆ ತಂದಿಲ್ಲ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಗೂಲಪ್ಪ ಮಾಹಿತಿ ನೀಡಿದ್ದಾರೆ.