ಸೋಮವಾರಪೇಟೆ, ಜು.12: ಪಟ್ಟಣ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಕಂಟೈನ್‍ಮೆಂಟ್ ವಲಯ ತೆರೆದಿರುವದರಿಂದ ಸೋಮವಾರದಂದು ನಡೆಯುವ ಸಂತೆಯನ್ನು ರದ್ದುಗೊಳಿಸಲಾಗಿದೆ.

ಅದರಂತೆ ಕಳೆದೆರಡು ವಾರದ ಸಂತೆ ರದ್ದುಗೊಂಡಿದ್ದು, ತಾ. 13ರ (ಇಂದು) ಸೋಮವಾರದಂದು ನಡೆಯಬೇಕಿದ್ದ ಸಂತೆಯನ್ನೂ ರದ್ದುಗೊಳಿಸಿ ತಹಶೀಲ್ದಾರ್ ಆದೇಶ ನೀಡಿದ್ದಾರೆ.

ಈ ಹಿನ್ನೆಲೆ ಪಟ್ಟಣ ಪಂಚಾಯಿತಿ ವತಿಯಿಂದ ಸಂತೆ ಮಾರುಕಟ್ಟೆ ಆವರಣಕ್ಕೆ ಪ್ರವೇಶಿಸುವ ಎಲ್ಲಾ ದಾರಿಗಳನ್ನು ಬಂದ್ ಮಾಡಲಾಗಿದ್ದು, ಸಾರ್ವಜನಿಕರು, ವರ್ತಕರು ಮಾರುಕಟ್ಟೆಯೊಳಗೆ ಪ್ರವೇಶಿಸದಂತೆ ದಿಗ್ಬಂಧನ ವಿಧಿಸಲಾಗಿದೆ.

ಇಲ್ಲಿನ ಸಿ.ಕೆ. ಸುಬ್ಬಯ್ಯ ರಸ್ತೆ, ಕ್ಲಬ್‍ರಸ್ತೆ, ವರ್ಕ್‍ಶಾಪ್ ಏರಿಯಾ ಮೂಲಕ ಸಂತೆಗೆ ಸಂಪರ್ಕ ಕಲ್ಪಿಸುವ ಪ್ರವೇಶ ದ್ವಾರಗಳಿಗೆ ಬ್ಯಾರಿಕೇಡ್ ಅಳವಡಿಸಲಾಗಿದೆ.

ಕಳೆದ ವಾರದ ಸಂತೆಯಂದು 60ಕ್ಕೂ ಅಧಿಕ ಮಂದಿ ವರ್ತಕರು, ನೂರಾರು ಗ್ರಾಹಕರು ಸಂತೆಯೊಳಗೆ ಜಮಾಯಿಸಿದ್ದರಿಂದ ತಹಶೀಲ್ದಾರ್ ಆದೇಶ ಉಲ್ಲಂಘನೆಯಾಗಿತ್ತು. ಈ ಸಂದರ್ಭ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದ್ದರಲ್ಲದೇ, ಸಂತೆಯನ್ನು ತೆರವುಗೊಳಿಸಿದ್ದರು. ಈ ಬಾರಿಯ ಸಂತೆಯಂದು ಮುಂಜಾಗ್ರತಾ ಕ್ರಮವಾಗಿ ಪ್ರವೇಶ ಬಂದ್ ಮಾಡಲಾಗಿದ್ದು, ಇದನ್ನೂ ಮೀರಿ ಸಂತೆಯೊಳಗೆ ಪ್ರವೇಶಿಸಿದರೆ ಕಾನೂನು ಕ್ರಮ ಜರುಗಿಸುವದಾಗಿ ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಎಚ್ಚರಿಕೆ ನೀಡಿದ್ದಾರೆ.

ಸೆಲೂನ್ ಬಂದ್

ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿನ ಹೇರ್ ಕಟ್ಟಿಂಗ್ ಸೆಲೂನ್‍ಗಳನ್ನು ತಾ. 28ರವರೆಗೆ ಬಂದ್ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

ಇಲ್ಲಿನ ಸವಿತಾ ಸಮಾಜದ ಆವರಣದಲ್ಲಿ ಅಧ್ಯಕ್ಷ ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ತುರ್ತು ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಮುಂದಿನ 28ರವರೆಗೂ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಲಾಯಿತು.

ಸಭೆಯಲ್ಲಿ ಸವಿತಾ ಸಮಾಜದ ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ಬಾಲಕೃಷ್ಣ, ಪದಾಧಿಕಾರಿಗಳಾದ ಮಹೇಶ್, ಸಿದ್ದರಾಜು, ಶ್ರೀನಿವಾಸ್, ಶಿವಕುಮಾರ್, ಶ್ರೀಕಂಠ, ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.