ಸೋಮವಾರಪೇಟೆ, ಜು. 12: ಪಟ್ಟಣ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಳ್ಳದಿಣ್ಣೆ ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಹಳ್ಳದಿಣ್ಣೆಗೆ ಸಂಪರ್ಕ ಕಲ್ಪಿಸುವ ವಲ್ಲಭಭಾಯಿ ಬಡಾವಣೆ ರಸ್ತೆ ಸೇರಿದಂತೆ ಹಳ್ಳದಿಣ್ಣೆ ಗ್ರಾಮವನ್ನು ನಿಯಂತ್ರಿತ ವಲಯ ಎಂದು ಘೋಷಿಸಲಾಗಿದೆ.
ಪಟ್ಟಣದ ಬ್ಯಾಂಕ್ ಒಂದರ ಉದ್ಯೋಗಿಯಾಗಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ತಾಲೂಕು ಆಡಳಿತದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಹಳ್ಳದಿಣ್ಣೆ ಗ್ರಾಮವನ್ನು ಕಂಟೈನ್‍ಮೆಂಟ್ ವಲಯ ಮಾಡುವ ಮೂಲಕ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ತಾಲೂಕು ತಹಶೀೀಲ್ದಾರ್ ಗೋವಿಂದರಾಜು ಸೇರಿದಂತೆ ಆಡಳಿತ ಸಿಬ್ಬಂದಿಗಳು, ಪೊಲೀಸ್ ಇಲಾಖೆ ನಿಯಂತ್ರಣ ವಲಯವನ್ನು ರಚಿಸಿದ್ದು, ವಾಹನ, ಜನ ಸಂಚಾರಕ್ಕೆ ಬ್ರೇಕ್ ಹಾಕಿದೆ.
ಅಸಮಾಧಾನ: ಪಟ್ಟಣದ ಬ್ಯಾಂಕ್ ಉದ್ಯೋಗಿ ಕಳೆದ 10 ದಿನಗಳ ಹಿಂದೆಯೇ ಗಂಟಲು ದ್ರವವನ್ನು ಪರೀಕ್ಷೆಗೆ ನೀಡಿದ್ದು, ನಿನ್ನೆಯಷ್ಟೇ ವರದಿ ಬಂದಿದೆ. ಗಂಟಲ ದ್ರವವನ್ನು ಸಂಗ್ರಹಿಸಿದ ನಂತರ ಆರೋಗ್ಯ ಇಲಾಖೆ ಯಾವದೇ ಮುನ್ನೆಚ್ಚರಿಕೆ ಕ್ರಮವನ್ನು ಪಾಲಿಸುವಂತೆ ಸೂಚಿಸದ ಹಿನ್ನೆಲೆ ವ್ಯಕ್ತಿ ಎಂದಿನ ದಿನಚರಿಯಲ್ಲಿ ತೊಡಗಿಕೊಂಡಿದ್ದಾರೆ.
ಗಂಟಲ ದ್ರವ ನೀಡಿ 10 ದಿನಗಳ ನಂತರ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದ್ದು, ಈ 10 ದಿನಗಳಲ್ಲಿ ವ್ಯಕ್ತಿ ಸಾಕಷ್ಟು ಕಡೆಗಳಲ್ಲಿ ಸುತ್ತಾಡಿದ್ದಾರೆ. ಬ್ಯಾಂಕ್‍ನಲ್ಲೂ ಕೆಲಸ ನಿರ್ವಹಿಸಿದ್ದು, ಸಾವಿರಾರು ಸಂಖ್ಯೆಯ ಗ್ರಾಹಕರು ಬ್ಯಾಂಕ್‍ಗೆ ಬಂದು ಹೋಗಿದ್ದಾರೆ.
ಗಂಟಲ ದ್ರವವನ್ನು ಸಂಗ್ರಹಿಸಿದ ನಂತರ ಒಂದೆರಡು ದಿನಗಳ ಕಾಲ ಹೋಂ ಕ್ವಾರೆಂಟೈನ್ ವಿಧಿಸಿ, ಪ್ರಯೋಗಾಲಯದ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿಯೇ ಕೋವಿಡ್-19 ಪರೀಕ್ಷಾ ಕೇಂದ್ರವಿದ್ದರೂ ಸಹ ತ್ವರಿತವಾಗಿ ಪರೀಕ್ಷೆ ನಡೆಸಿ ವರದಿ ನೀಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗುತ್ತಿರುವ ಹಿನ್ನೆಲೆ ಕೊರೊನಾ ವೈರಸ್ ಹೆಚ್ಚು ಹರಡಲು ಕಾರಣವಾಗುತ್ತಿದೆ. ಕನಿಷ್ಟ ಗಂಟಲ ದ್ರವ ಪಡೆದ ವ್ಯಕ್ತಿಗಳಿಗೆ ಕೆಲ ದಿನಗಳ ಕಾಲ ಹೋಂ ಕ್ವಾರೆಂಟೈನ್ ಪಾಲಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಬೇಕು. ತ್ವರಿತ ಗತಿಯಲ್ಲಿ ಪರೀಕ್ಷಾ ವರದಿ ನೀಡಲು ಕ್ರಮವಹಿಸಬೇಕು ಎಂದು ಸಾರ್ವಜನಿಕರು ಅಭಿಪ್ರಾಯಿಸುತ್ತಿದ್ದಾರೆ.
ಬ್ಯಾಂಕ್‍ನಿಂದ ಆತಂಕ: ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿ ಬ್ಯಾಂಕ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಹತ್ತು ದಿನಗಳ ನಂತರ ಪಾಸಿಟಿವ್ ದೃಢಪಟ್ಟಿದೆ. ಈ ದಿನಗಳಲ್ಲಿ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಇತರ ಸಿಬ್ಬಂದಿಗಳು, ಬ್ಯಾಂಕ್‍ಗೆ ತೆರಳಿದ ಗ್ರಾಹಕರಿಗೆ ಇದೀಗ ಆತಂಕ ದುಪ್ಪಟ್ಟಾಗಿದೆ.
ಇದರೊಂದಿಗೆ ಬ್ಯಾಂಕ್‍ನ ಪಿಗ್ಮಿ ಸಿಬ್ಬಂದಿಗಳು ಸಾರ್ವಜನಿಕವಾಗಿ ಸಂಚರಿಸಿ, ಪಿಗ್ಮಿ ಹಣ ಸಂಗ್ರಹಿಸಿದ್ದಾರೆ. ದಿನನಿತ್ಯ ಅಂಗಡಿ, ಸಾರ್ವಜನಿಕರಿಂದ ಪಿಗ್ಮಿ ಸಂಗ್ರಹಿಸಿರುವ ಮಂದಿ, ಕೊರೊನಾ ಪಾಸಿಟಿವ್ ವ್ಯಕ್ತಿಯ ಸಂಪರ್ಕ ಸಾಧಿಸಿರುವ ಸಾಧ್ಯತೆಯಿದೆ. ಒಟ್ಟಾರೆ ಸೋಮವಾರಪೇಟೆ ಪಟ್ಟಣ ವ್ಯಾಪ್ತಿ ಯಲ್ಲಿ ಕೊರೊನಾದ ವ್ಯಾಪ್ತಿಯನ್ನು ಊಹಿಸಿಕೊಳ್ಳಲೂ ಅಸಾಧ್ಯವಾಗಿರುವ ಸನ್ನಿವೇಶ ಸೃಷ್ಟಿಸಿದೆ.
ಬ್ಯಾಂಕ್ ಸ್ಯಾನಿಟೈಸ್: ಕೊರೊನಾ ಪಾಸಿಟಿವ್ ಪ್ರಕರಣದ ವ್ಯಕ್ತಿ ಕರ್ತವ್ಯ ನಿರ್ವಹಿಸುತ್ತಿದ್ದ ಬ್ಯಾಂಕ್‍ನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಬ್ಯಾಂಕ್ ಕಟ್ಟಡಕ್ಕೆ ಕ್ರಿಮಿನಾಶಕ ಸಿಂಪಡಿಸಿದ್ದಾರೆ.