ವೀರಾಜಪೇಟೆ, ಜು. 11: ಕೆಲವು ದಿನಗಳ ಹಿಂದೆ ವರ್ತಕರು ವೀರಾಜಪೇಟೆ ಚೇಂಬರ್ ಆಫ್ ಕಾಮರ್ಸ್‍ನ ಸ್ಥಾನೀಯ ಸಮಿತಿಯ ಮೇಲೆ ಮಾಡಿರುವ ಆರೋಪ ಆಧಾರ ರಹಿತವಾಗಿದ್ದು, ಇದನ್ನು ಖಂಡಿಸಿ ಸಭೆ ತೀರ್ಮಾನಿಸಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಅಮ್ಮಣಿಚಂಡ ಎನ್. ರವಿ ಉತ್ತಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಾ.4ರಂದು ವೀರಾಜಪೇಟೆಯಲ್ಲಿ ಸ್ಥಾನೀಯ ಸಮಿತಿ ಅಧ್ಯಕ್ಷ ಮಾದಪಂಡ ಕಾಶಿ ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತಾ.27ರಂದು ಇಲ್ಲಿನ ಪುರಭವನದಲ್ಲಿ ನಡೆದ ವರ್ತಕರ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ವರ್ತಕರು ಚೇಂಬರ್‍ನ ಸದಸ್ಯತ್ವ ಹೊಂದಿಲ್ಲ, ಇನ್ನು ಕೆಲವರು ವರ್ತಕರುಗಳಾಗಿರಲಿಲ್ಲ ಎಂದು ಹೇಳಿದರು. ಚೇಂಬರ್‍ನ ವೀರಾಜಪೇಟೆ ಸ್ಥಾನೀಯ ಸಮಿತಿಯು ಚೇಂಬರ್‍ನ ಜಿಲ್ಲಾ ಸಮಿತಿಯು ಕೈಗೊಳ್ಳುವ ವರ್ತಕರ ಪರವಾದ ನಿಲುವುಗಳಿಗೆ ತನ್ನ ಬೆಂಬಲ ವ್ಯಕ್ತಪಡಿಸಿ ಆದ್ಯತೆ ನೀಡುತ್ತಿದೆ. ಕೊರೊನಾ ಲಾಕ್‍ಡೌನ್ ಸಂಬಂಧದಲ್ಲಿ ಜಿಲ್ಲಾ ಸಮಿತಿಯ ತೀರ್ಮಾನವನ್ನು ಸಮಿತಿ ಬೆಂಬಲಿಸಿದ್ದರಿಂದ ದುರುದ್ದೇಶದಿಂದ ಕೆಲವರು ವಿರೋಧ ವ್ಯಕ್ತಪಡಿಸಿ ಇಲ್ಲಿನ ಸ್ಥಾನೀಯ ಸಮಿತಿಯ ಮೇಲೆ ವೃಥಾ ಆರೋಪ ಹೊರಿಸಿದ್ದಾರೆ. ಆಯ್ದ ವರ್ತಕರುಗಳಿಗೆ ಸಮಿತಿಯ ಮೇಲೆ ಅಸಮಧಾನವಿದ್ದರೆ ನೇರವಾಗಿ ಸಮಿತಿಯ ಪ್ರಮುಖರನ್ನು ಸಂಪರ್ಕಿಸಿ ವಿಚಾರ ವಿನಿಮಯ ಮಾಡಬಹುದಿತ್ತು. ಇದನ್ನು ಮಾಡದೆ ಅನಧಿಕೃತವಾಗಿ ಸಭೆ ಕರೆದು ಆರೋಪ ಮಾಡಿರುವುದು ಸರಿಯಲ್ಲ ಅಧಿಕೃತವು ಅಲ್ಲ ಎಂದು ಸಭೆ ನಿರ್ಧರಿಸಿದೆ ಎಂದು ಹೇಳಿದರು.
ಸ್ಥಾನೀಯ ಸಮಿತಿ ಯಾವುದೇ ಪ್ರಮುಖ ನಿರ್ಧಾರವನ್ನು ಕೈಗೊಳ್ಳುವಾಗ ಸದಸ್ಯ ವರ್ತಕರುಗಳೊಂದಿಗೆ ಚರ್ಚಿಸಿ ನಂತರ ಜಿಲಾ ಸಮಿತಿಗೂ ತಿಳಿಸಿ ಅಂತಿಮವಾಗಿ ತೀರ್ಮಾನ ಕೈಗೊಳ್ಳುತ್ತಿದೆ. ಸಮಿತಿಯು ಕೈಗೊಳ್ಳುವ ಯಾವುದೇ ನಿರ್ಧಾರ ವರ್ತಕರ ಪರ ಹಾಗೂ ಅವರಿಗೆ ಒಳಿತಾಗುವ ನಿರ್ಧಾರಗಳಾಗಿರುತ್ತವೆ. ಇದನ್ನು ಸಹಿಸದ ಕೆಲವರು ಇದನ್ನು ಸಮಿತಿ ವಿರೋಧದ ನೀತಿ ಎಂದು ಭಾವಿಸಿ ಸ್ಥಾನೀಯ ಸಮಿತಿ ವರ್ತಕರ ವಿರುದ್ಧವಿದೆ ಎಂದು ಗೂಬೆ ಕೂರಿಸುತ್ತಿರುವುದು ಇಂತಹ ವರ್ತಕರ ವಲಯಕ್ಕೆ ಶೋಭೆ ತರುವಂತಹದ್ದಲ್ಲ ಎಂದು ರವಿ ಉತ್ತಪ್ಪ ದೂರಿದರು.
ಗೋಷ್ಠಿಯಲ್ಲಿ ಸಮಿತಿಯ ಖಜಾಂಚಿ ಬಿ.ಎಂ.ಸುರೇಶ್, ಪಿ. ರಘುನಾಣಯ್ಯ, ಕೆ.ಎಂ.ಸೋಮಯ್ಯ, ಎಸ್.ಎಚ್.ಮೈನುದ್ದೀನ್, ಸೋಯೆಬ್ ಬಾಬು, ಮುಸ್ತಾಫ ಹಾಜರಿದ್ದರು.ವೀರಾಜಪೇಟೆ ಚೇಂಬರ್ ಸ್ಥಾನೀಯ ಸಮಿತಿ ಹೇಳಿಕೆ