ಕುಶಾಲನಗರ, ಜು. 11: ಗುಡ್ಡೆಹೊಸೂರು ತೆಪ್ಪದಕಂಡಿ ಬಳಿ ನಿರ್ಮಾಣಗೊಂಡಿರುವ ತೂಗುಸೇತುವೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಪೊಲೀಸರು ನಿರ್ಬಂಧ ಹೇರಿದ್ದಾರೆ. ಇದೀಗ ನಾಗರಿಕರಿಗೆ ಓಡಾಡಲು ಮಾತ್ರ ಈ ಸೇತುವೆಯಲ್ಲಿ ಅವಕಾಶವಿದ್ದು ವಾಹನ ಸಂಚಾರ ಮಾಡದಂತೆ ಸೇತುವೆಯ ಮುಖ್ಯದ್ವಾರದಲ್ಲಿ ತಡೆ ನಿರ್ಮಿಸಿದ್ದಾರೆ.
ಮೈಸೂರು ಜಿಲ್ಲೆ ಮತ್ತು ಕೊಡಗು ಜಿಲ್ಲೆಯ ಹಲವು ಗ್ರಾಮಗಳನ್ನು ಸಂಪರ್ಕಿಸುವ ಉದ್ದೇಶದೊಂದಿಗೆ ನಿರ್ಮಾಣಗೊಂಡ ಸೇತುವೆಯಲ್ಲಿ ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಗಾಂಜಾ ಮತ್ತಿತರ ವಸ್ತುಗಳನ್ನು ಯಥೇಚ್ಚವಾಗಿ ಸಾಗಾಟ ಮಾಡುತ್ತಿರುವ ಪ್ರಕರಣಗಳು ಪತ್ತೆಯಾದ ಹಿನೆÀ್ನಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ. ಮೈಸೂರು ಜಿಲ್ಲೆಯ ಮರೂರು ಸೇರಿದಂತೆ ಹತ್ತಾರು ಗ್ರಾಮಗಳಿಂದ ನಿತ್ಯ ನೂರಾರು ದ್ವಿಚಕ್ರ ವಾಹನಗಳು ಕೊಡಗು ಜಿಲ್ಲೆಯ ಗುಡ್ಡೆಹೊಸೂರು ಕಡೆಗೆ ಬರುತ್ತಿದ್ದು ಈ ಮೂಲಕ ಅಕ್ರಮ ಚಟುವಟಿಕೆಗಳು ನಡೆದಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಮಾಹಿತಿ ನೀಡಿದ್ದಾರೆ.
ಈ ಹಿನೆÀ್ನಲೆಯಲ್ಲಿ ಕುಶಾಲನಗರ ಡಿವೈಎಸ್ಪಿ ಮತ್ತು ಅಧಿಕಾರಿ, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕ್ರಮಕೈಗೊಳ್ಳಲಾಗಿದೆ. ದ್ವಿಚಕ್ರ ವಾಹನಗಳು ಇದೀಗ 10 ರಿಂದ 15 ಕಿಮೀ ಬಳಸಿ ಸಂಚಾರ ಮಾಡಬೇಕಾಗಿದ್ದು ಅಲ್ಲಿನ ಗ್ರಾಮಸ್ಥರಿಗೆ ಇದರಿಂದ ಅನಾನುಕೂಲ ಉಂಟಾಗಿದೆ. ಕೆಲವೇ ಜನರ ಅಕ್ರಮ ಚಟುವಟಿಕೆಗಳಿಂದ ಎರಡೂ ಭಾಗದ ರೈತರು, ವಿದ್ಯಾರ್ಥಿಗಳು ಸೇರಿದಂತೆ ಕೂಲಿ ಕಾರ್ಮಿಕರು ದ್ವಿಚಕ್ರ ವಾಹನದ ಮೂಲಕ ತೆರಳಲು ಸುತ್ತಿಬಳಸಿ ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಇಲ್ಲಿನ ಜನತೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.