ಗೋಣಿಕೊಪ್ಪಲು, ಜು. 9: ತನ್ನ ಕೆಲಸ ಮುಗಿಸಿ ಬೈಕ್ ನಲ್ಲಿ ವಾಪಸು ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭ ಹಿಂಬದಿಯಿಂದ ಬಂದ ಮಾರುತಿ ವ್ಯಾನ್ ಗುದ್ದಿದ ಪರಿಣಾಮ ಬೈಕ್ ಚಾಲಕನಿಗೆ ಗಂಭೀರ ಸ್ವರೂಪದ ಗಾಯವಾಗಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡ ವ್ಯಕ್ತಿ ಮೂಲತ ಹಾಸನ ಜಿಲ್ಲೆಯವರಾಗಿದ್ದು, ಗೋಣಿಕೊಪ್ಪಲುವಿನ ಅನುದಾನಿತ ಪ್ರೌಢ ಶಾಲೆಯ ದ್ವಿತೀಯ ದರ್ಜೆಯ ಗುಮಾಸ್ತ (ಕ್ಲರ್ಕ್) ಕಿರಣ್ ಕುಮಾರ್ (45) ಎಂದು ತಿಳಿದು ಬಂದಿದೆ. ಡಿಕ್ಕಿ ಪಡಿಸಿದ ವ್ಯಾನ್ ಚಾಲಕ ಎ.ಪ್ರವೀಣ್ ಎಂದು ಗೊತ್ತಾಗಿದೆ.
ಬೈಕ್ ಚಾಲಕ ಕಿರಣ್ ಕುಮಾರ್ ಗುರುವಾರ ಸಂಜೆ ನಾಲ್ಕು ಗಂಟೆಯ ವೇಳೆ ವೀರಾಜಪೇಟೆಯ ಬಿಇಒ ಕಚೇರಿಯ ಕೆಲಸಕ್ಕೆ ತೆರಳಿ ಬಸ್ ಇಲ್ಲದ ಕಾರಣ ತನ್ನ ಬೈಕ್‍ನಲ್ಲಿ ವಾಪಸ್ಸಾಗು ತ್ತಿದ್ದ ಸಂದರ್ಭ ಬಿಟ್ಟಂಗಾಲ ಬಳಿಯ ಆರ್‍ಕೆಎಫ್ ಸಮೀಪ ಹಿಂಬದಿಯಿಂದ ಬಂದ ಮಾರುತಿ ವ್ಯಾನ್ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಗುದ್ದಿದ ರಭಸಕ್ಕೆ ಬೈಕ್ ಚಾಲನೆ ಮಾಡುತ್ತಿದ್ದ ಕಿರಣ್ ಕುಮಾರ್ ಬೈಕ್ ಸಮೇತವಾಗಿ ಅನತಿ ದೂರದಲ್ಲಿ ಬಿದ್ದಿದ್ದಾರೆ.
ಬಿದ್ದ ರಭಸಕ್ಕೆ ಕಿರಣ್ ಕುಮಾರ್ ರವರ ಕಾಲಿನ ಹಾಗೂ ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ. ನಾಗರಿಕರು ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ವೀರಾಜಪೇಟೆಯ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.
ನಂತರದಲ್ಲಿ ಸುದ್ದಿ ತಿಳಿದ ಶಾಲೆಯ ಅಧ್ಯಾಪಕರು ಖಾಸಗಿ ವಾಹನದಲ್ಲಿ ಹಾಸನ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದಾರೆ.ಸುದ್ದಿ ತಿಳಿದ ಬಿಇಒ ಶ್ರೀಶೈಲಾ ಬೀಳಗಿ ಶಾಲೆಯ ಮುಖ್ಯ ಶಿಕ್ಷಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ವೀಣಾನಾಯಕ್, ಸಿ.ಪಿ.ಐ. ಕ್ಯಾತೆಗೌಡ ಹಾಗೂ ಪೆÇಲೀಸ್ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ವ್ಯಾನ್ ಚಾಲಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ. - ಹೆಚ್.ಕೆ.ಜಗದೀಶ್