ಕುಶಾಲನಗರ, ಜು. 9: ಗುಡ್ಡೆಹೊಸೂರು ಸಮೀಪದ ತೆಪ್ಪದಕಂಡಿಯಲ್ಲಿರುವ ತೂಗು ಸೇತುವೆಯಲ್ಲಿ ದ್ವಿಚಕ್ರ ವಾಹನಗಳು ತೆರಳದಂತೆ ಕ್ರಮಕೈಗೊಳ್ಳುವ ಬಗ್ಗೆ ಪೊಲೀಸ್ ಇಲಾಖೆ ಚಿಂತನೆ ಹರಿಸಿದೆ. ಕಳೆದ 8 ವರ್ಷಗಳ ಹಿಂದೆ ಕಾವೇರಿ ನದಿಗೆ ಅಡ್ಡಲಾಗಿ ತೆಪ್ಪದಕಂಡಿಯಲ್ಲಿ ನಿರ್ಮಾಣಗೊಂಡ ಈ ಸೇತುವೆ ಮೂಲಕ ದ್ವಿಚಕ್ರ ವಾಹನಗಳಿಗೆ ತೆರಳಲು ಅವಕಾಶ ಕಲ್ಪಿಸಿದ್ದು ಕೆಲವು ವಾಹನ ಸವಾರರು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ಖಚಿತ ಮಾಹಿತಿ ದೊರೆತಿದೆ.
ಗುಡ್ಡೆಹೊಸೂರು-ನಂಜರಾಯಪಟ್ಟಣ ಮಾರ್ಗದಲ್ಲಿರುವ ತೆಪ್ಪದಕಂಡಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮರೂರು ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಆದರೆ ಈ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ಏರತೊಡಗಿದ್ದು ಮೈಸೂರು ಕಡೆಯಿಂದ ಗಾಂಜಾ ಮತ್ತಿತರ ವಸ್ತುಗಳ ಸರಬರಾಜು ಯಥೇಚ್ಚವಾಗಿ ಆಗುತ್ತಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಗಡಿಭಾಗದಲ್ಲಿ ಅಕ್ರಮವಾಗಿ ಇಸ್ಪೀಟ್ ಅಡ್ಡೆಗಳು ತಲೆ ಎತ್ತುತ್ತಿದ್ದು ಪೊಲೀಸರ ಕಾರ್ಯಾಚರಣೆ ಸಂದರ್ಭ ಆರೋಪಿಗಳು ಗಡಿಭಾಗದ ಗ್ರಾಮಗಳಿಗೆ ಪರಾರಿಯಾಗುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಇದರಿಂದ ಪೊಲೀಸ್ ಇಲಾಖೆ ಈ ತೂಗುಸೇತುವೆ ಮೂಲಕ ಜನರ ಓಡಾಟಕ್ಕೆ ಮಾತ್ರ ಅನುವು ಮಾಡುವುದರೊಂದಿಗೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರುವ ಬಗ್ಗೆ ಚಿಂತನೆ ಹರಿಸಲಾಗಿದೆ. ಈ ಸಂಬಂಧ ಕುಶಾಲನಗರ ಡಿವೈಎಸ್ಪಿ ಶೈಲೇಂದ್ರಕುಮಾರ್, ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇತ್ತ ಕಣಿವೆ ಬಳಿಯಿರುವ ಕೊಡಗು-ಮೈಸೂರು ಗಡಿಗ್ರಾಮಗಳ ಸಂಪರ್ಕಕ್ಕೆ ನಿರ್ಮಾಣಗೊಂಡಿರುವ ತೂಗುಸೇತುವೆಯಲ್ಲಿ ವಾಹನಗಳು ತೆರಳದಂತೆ ನಿರ್ಬಂಧಿಸಿದ್ದು ಜನರ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಿರುವುದು ಗಮನಿಸಬಹುದು.
-ಸಿಂಚು