ಕೂಡಿಗೆ, ಜು. 10: ಕೂಡಿಗೆ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಏತ ನೀರಾವರಿ ಯೋಜನೆಯ ಅಡಿಯಲ್ಲಿ ರೂ. ಎರಡು ಕೋಟಿ ವೆಚ್ಚದಲ್ಲಿ ರೈತರಿಗೆ ಬೇಸಾಯ ಮಾಡಲು ನೀರು ಒದಗಿಸುವ ಕಾಮಗಾರಿ ಆರಂಭಗೊಂಡಿದೆ.
ಕೂಡಿಗೆ ಗ್ರಾಮದ ಹಾರಂಗಿ ನದಿಯ ಸಮೀಪದಲ್ಲಿ ಹಳೆಯ ಏತ ನೀರಾವರಿ ಯೋಜನೆಯ ಕೇಂದ್ರವಿದೆ. ಈ ಕೇಂದ್ರವು ಹಾರಂಗಿ ನದಿಯಲ್ಲಿ ಹೆಚ್ಚು ನೀರು ಬಂದ ಸಂದರ್ಭದಲ್ಲಿ ಯಂತ್ರೋಪಕರಣಗಳು ನೀರಿನಲ್ಲಿ ಮುಳುಗಿ ಹಾಳಾಗುತ್ತಿದ್ದವು. ಇದರಿಂದಾಗಿ ಈ ಭಾಗದ ರೈತರಿಗೆ ಬೇಸಾಯ ಮಾಡಲು ತೊಂದರೆ ಆಗುತ್ತಿತ್ತು. ಇದನ್ನು ತಿಳಿದ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಹೊಸ ಮಾದರಿ ಯೋಜನೆಗಳನ್ನು ಕೈಗೊಳ್ಳಲು ಸರಕಾರದಿಂದ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಾರಂಭ ಮಾಡಿದ್ದಾರೆ.
ಈಗಾಗಲೇ ಹಾರಂಗಿ ನದಿಯ ನೀರಿನ ಮಟ್ಟ ಹೆಚ್ಚಾಗುವ ಹಿನ್ನೆಲೆಯಲ್ಲಿ ನದಿಯ ದಡದ ಕಟ್ಟಡದ ಕಾಮಗಾರಿ, ಮತ್ತು ನದಿಯಿಂದ ನೀರನ್ನು ಎತ್ತುವ ಪೈಪ್ಗಳ ಜೋಡಣೆ ಮತ್ತು ಕಾಂಕ್ರಿಟೀಕರಣದ ಪ್ರಥಮ ಹಂತದ ಕಾಮಗಾರಿ ನಡೆಯುತ್ತಿದೆ.
ಈ ಯೋಜನೆಯಲ್ಲಿ ನದಿಯಿಂದ 70 ಹೆಚ್.ಪಿ. ಸಾಮಥ್ರ್ಯದ ಮೋಟಾರು ಅಳವಾಡಿಸಲಾಗುವುದು ಅಲ್ಲದೆ ನೂತನ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಅಳವಡಿಸಿ ಬೃಹತ್ ಗಾತ್ರದ ಪೈಪ್ಗಳ ಮೂಲಕ ನೀರನ್ನು ತಳ ಮಟ್ಟದ ಟ್ಯಾಂಕ್ನಲ್ಲಿ ಸಂಗ್ರಹಿಸಿ ನಂತರ ರೈತರ ಜಮೀನಿಗೆ ಉಪ ಕಾಲುವೆಗಳ ಮೂಲಕ ಹರಿಸಲಾಗುವುದು. ಈ ಯೋಜನೆಯ ಅಡಿಯಲ್ಲಿ 120 ಎಕರೆಗಳಷ್ಟು ಪ್ರದೇಶಕ್ಕೆ ಬೇಸಾಯ ಮಾಡಲು ನೀರನ್ನು ಒದಗಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಬಿ.ರಫೀಕ್ ತಿಳಿಸಿದ್ದಾರೆ.
ಈ ನೀರು ಒದಗಿಸುವ ಯೋಜನೆಯ ಕಾಮಗಾರಿಯನ್ನು ಅತಿ ಶೀಘ್ರವಾಗಿ ಪೂರ್ಣಗೊಳಿಸಿ ರೈತರು ಬೇಸಾಯ ಮಾಡಲು ಅನುಕೂಲ ಕಲ್ಪಿಸುತ್ತದೆ. ಇತರೆ ಉಳಿಕೆ ಕಾಮಗಾರಿಗಳನ್ನು ಮತ್ತು ಸಂಪರ್ಕ ರಸ್ತೆ ಉಪ ಕಾಲುವೆಗಳ ದುರಸ್ತಿಯ ಕೆಲಸವನ್ನು ಮುಗಿಸಿ ನೀರು ಸರಾಗವಾಗಿ ರೈತರ ಜಮೀನಿಗೆ ತಲುಪಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
- ಕೆ.ಕೆ ನಾಗರಾಜಶೆಟ್ಟಿ.