ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ರಚನೆ
ಬೆಂಗಳೂರು, ಜು. 9: ಗ್ರಾಮಾಂತರ ಭಾಗದಲ್ಲಿ ಕೋವಿಡ್ ವ್ಯಾಪಕವಾಗಿ ಹರಡದಂತೆ ತಡೆಯಲು ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆಯನ್ನು ರಚಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಕೋವಿಡ್-19 ಕಾಯಿಲೆಯು ಸಾಂಕ್ರಾಮಿಕ ರೋಗವಾಗಿದ್ದು, ವಿಶ್ವದಾದ್ಯಂತ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಈ ಕಾಯಿಲೆಯನ್ನು ನಿಯಂತ್ರಿಸಲು ಹಾಗೂ ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಗಟ್ಟಲು ಸರ್ಕಾರವು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಈ ಸೋಂಕು ಹರಡದಂತೆ ಗ್ರಾಮ ಪಂಚಾಯಿತಿಗಳ ವತಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉಲ್ಲೇಖಿತ ಸರ್ಕಾರದ ಸುತ್ತೋಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಮತ್ತು ಗ್ರಾಮ ಮಟ್ಟದ ಕಾರ್ಯಪಡೆ ರಚಿಸಿ ಆದೇಶಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ರಚಿಸಲಾಗಿದ್ದು, ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಕಾರ್ಯಪಡೆಯ ಅಧ್ಯಕ್ಷರಾಗಿರುತ್ತಾರೆ. ಪ್ರಾಥಮಿಕ/ಪ್ರೌಢ ಶಾಲಾ ಶಿಕ್ಷಕರು, ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರು, ಕೇಂದ್ರ ಸ್ಥಾನದ ಗ್ರಾಮ ಲೆಕ್ಕಾಧಿಕಾರಿ/ಕಂದಾಯ ನಿರೀಕ್ಷಕರು, ಹೋಬಳಿ ಕೇಂದ್ರ ಸ್ಥಾನವಾಗಿದ್ದಲ್ಲಿ ಉಪ ತಹಶೀಲ್ದಾರ್, ಸ್ಥಳೀಯ ಪೊಲೀಸ್ ಠಾಣೆಯ ಎಸ್‍ಹೆಚ್‍ಒ, ಅಥವಾ ಅವರು ನೇಮಿಸಿದ ಪ್ರತಿನಿಧಿ, ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಥವಾ ಅವರ ಪ್ರತಿನಿಧಿ, ಅಂಗನವಾಡಿ ಮೇಲ್ವಿಚಾರಕರು ಅಥವಾ ಅವರ ಪ್ರತಿನಿಧಿ, ಎಎನ್‍ಎಂ/ಆಶಾ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಪ್ರತಿನಿಧಿ, ಗ್ರಾಮ ಮಟ್ಟದ ಪುನರ್ ವಸತಿ ಕಾರ್ಯಕರ್ತರು, ಸ್ಥಳೀಯವಾಗಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಸ್ವಯಂಸೇವಕರು ಈ ಕಾರ್ಯಪಡೆಯ ಸದಸ್ಯರಾಗಿರುತ್ತಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾರ್ಯಪಡೆಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಸ್ವಯಂ ಸೇವಕರಾಗಲು ಇಚ್ಛಿಸಿದ್ದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆಯಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಬಹುದು.
ಮೇಲ್ವಿಚಾರಣೆಗೆ ಐಎಎಸ್ ಅಧಿಕಾರಿಗಳ ನೇಮಕ
ಬೆಂಗಳೂರು, ಜು. 9: ನಗರದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಬೆಂಗಳೂರನ್ನು 8 ವಲಯಗಳಾಗಿ ವಿಭಾಗಿಸಿ ಪ್ರತಿ ವಲಯಗಳಿಗೆ ಓರ್ವ ಸಚಿವರು ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗೆ ಜವಾಬ್ದಾರಿ ನೀಡಲಾಗಿದೆ. ಅಲ್ಲದೆ 8 ವಲಯಗಳಿಗೂ 8 ಹಿರಿಯ ಐಎಎಸ್ ಅಧಿಕಾರಿಗಳನ್ನು ಮೇಲ್ವಿಚಾರಣೆಗಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂದ ಅಧಿಕೃತ ಆದೇಶ ಹೊರಡಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್, ಬೆಂಗಳೂರು ನಗರದಲ್ಲಿ ಕೋವಿಡ್-19 ಸೋಂಕು ಹರಡುವಿಕೆಯನ್ನು ಪರಿಣಾಮ ಕಾರಿಯಾಗಿ ನಿಯಂತ್ರಿಸುವ ನಿರ್ವಹಣಾ ಕ್ರಮಗಳ ಮೇಲ್ವಿಚಾರಣೆ ಮತ್ತು ಪರಿಶೀಲಿಸಲು ಹಾಗೂ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರ್ಯೋ ನ್ಮುಖರಾಗಲು ಅನುವಾಗುವಂತೆ ಈ ಕೆಳಕಂಡ ವಲಯ ಸಂಯೋಜಕರನ್ನು ತಾ. 9, 2020 ರಿಂದ ಅನ್ವಯವಾಗುವಂತೆ ರಚಿಸಿ, ನೇಮಿಸಲಾಗಿದೆ.
ವೈದ್ಯರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ
ಬೆಂಗಳೂರು, ಜು. 9: ಗುತ್ತಿಗೆ ಆಯುಷ್ ವೈದ್ಯರು, ವೇತನ ತಾರತಮ್ಯ, ಸೇವಾ ಭದ್ರತೆ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಹೋರಾಟಕ್ಕಿಳಿದಿದ್ದಾರೆ. ಈ ಸಂಬಂಧ ಆರೋಗ್ಯ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿರುವ ಆಯುಷ್ ವೈದ್ಯರು ತಾ. 14ರ ಸಂಜೆಯವರೆಗೂ ತಮ್ಮ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸದಿದ್ದಲ್ಲಿ ತಾ. 15 ರಂದು 2000 ಆಯುಷ್ ವೈದ್ಯರು ಸಾಮೂಹಿಕ ರಾಜೀನಾಮೆ ನೀಡುವುದಲ್ಲದೆ, ಖಾಸಗಿ ಆಯುಷ್ ವೈದ್ಯರು ಸೇವೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದ್ದಾರೆ. ರಾಜ್ಯದ 2000 ಗುತ್ತಿಗೆ ವೈದ್ಯರು ಹಾಗೂ 27000 ಖಾಸಗಿ ವೈದ್ಯರ ಹೋರಾಟಕ್ಕೆ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಬೆಂಬಲ ನೀಡಿದೆ. ಆಯುಷ್ ವೈದ್ಯರಿಗೂ ಇತರ ಹೋಮಿಯೋಪತಿಕ್ ವೈದ್ಯರಂತೆ ವೇತನ, ಸೇವಾ ಭದ್ರತೆ ಕಲ್ಪಿಸುವುದಾಗಿ ಮೇ 26 ರಂದು ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭರವಸೆ ನೀಡಿದ್ದರು.
ತಾ. 20 ರಂದು ಪಿಯು ಫಲಿತಾಂಶ
ಬೆಂಗಳೂರ, ಜು. 9: 2019-20ನೇ ಸಾಲಿನ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಫಲಿತಾಂಶ ತಾ. 20 ರಂದು ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ಬಾಕಿ ಉಳಿದಿದ್ದ ಇಂಗ್ಲೀಷ್ ಪರೀಕ್ಷೆ ಇತ್ತೀಚೆಗೆ ನಡೆದಿದ್ದು, ಮೌಲ್ಯಮಾಪನ ಪೂರ್ಣಗೊಂಡು ಇದೀಗ ಫಲಿತಾಂಶ ಸಿದ್ಧವಾಗಿದೆ.
ಚಾರ್ಮಾಡಿ ಘಾಟ್ ಸಂಚಾರ ನಿಷೇಧ
ಚಿಕ್ಕಮಗಳೂರು, ಜು. 9: ಕಳೆದ ವರ್ಷ ಭಾರೀ ಮಳೆಯ ಸಂದರ್ಭದಲ್ಲಿ ಸಂಚಾರಕ್ಕೆ ಅಡ್ಡಿಯಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಆಗಾಗ್ಗೆ ಭೂಕುಸಿತ ಸಂಭವಿಸುತ್ತಿದ್ದು ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದ್ದರೂ, ಈ ವರ್ಷವೂ ಭೂಕುಸಿತ ಸಂಭವಿಸುವ ಭೀತಿ ತಪ್ಪಿಲ್ಲ. ಈ ಕುರಿತಂತೆ ಮುನ್ನೆಚ್ಚರಿಕೆ ಕ್ರಮವಾಗಿ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ. ಗೌತಮ್ ಬಗಾಡಿ ಕಳೆದ ರಾತ್ರಿಯಿಂದ ಚಾರ್ಮಾಡಿ ಘಾಟ್ ರಾತ್ರಿ ಸಂಚಾರಕ್ಕೆ ನಿಷೇಧ ಹೇರಿ ಆದೇಶಿಸಿದ್ದಾರೆ. ಹವಾಮಾನ ಇಲಾಖೆಯು ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಮತ್ತು ತಾ. 9 ಮತ್ತು ತಾ. 10 ರಂದು ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಚಾರ್ಮಾಡಿ ಘಾಟ್ ರಸ್ತೆಯ ಭೂಕುಸಿತ ಸಂಬಂಧ ಮಾರ್ಗದಲ್ಲಿನ ಬೃಹತ್ ಮರಗಳ ಸ್ಥಳಾಂತರ ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗೆ ವರದಿ ಮಾಡಿದ್ದಾರೆ. ಈ ಹಿನ್ನೆಲೆ ಮಂಗಳೂರು-ತುಮಕೂರು ಎನ್‍ಹೆಚ್ 73 ಚಾರ್ಮಾಡಿ ಘಾಟ್ ರಸ್ತೆಯನ್ನು ಚಿಕ್ಕಮಗಳೂರು ಜಿಲ್ಲಾ ಗಡಿಯಿಂದ ಕೊಟ್ಟಿಗೆಹಾರದವರೆಗೆ ಪ್ರತಿದಿನ ರಾತ್ರಿ 7 ರಿಂದ ಮರುದಿನ ಬೆಳಿಗ್ಗೆ 7 ರವರೆಗೆ ಮುಚ್ಚಲು ತೀರ್ಮಾನಿ ಸಲಾಗಿದೆ. ಜಿಲ್ಲಾಧಿಕಾರಿಗಳ ಮುಂದಿನ ಆದೇಶ ಬರುವವರೆಗೆ ಈ ನಿಷೇಧ ಜಾರಿಯಲ್ಲಿರಲಿದೆ.
ವೈದ್ಯರ ಖಾಯಂಗೆ ಸಂಪುಟ ಒಪ್ಪಿಗೆ
ಬೆಂಗಳೂರು, ಜು. 9: ಗುತ್ತಿಗೆ ವೈದ್ಯರನ್ನು ಖಾಯಂಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಖಾಯಂಗೊಳಿಸುವ ವೇಳೆ ವೈದ್ಯರು ಸಲ್ಲಿಸಿರುವ ಸೇವಾ ಅವಧಿಯನ್ನು ಪರಿಗಣನೆ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಆರು ತಿಂಗಳು ಸೇವಾ ಅವಧಿಗೆ 2.5 ಗ್ರೇಸ್ ಮಾರ್ಕ್ ನೀಡಲು ನಿರ್ಧರಿಸಲಾಗಿದೆ. ಗರಿಷ್ಠ 30 ಅಂಕಗಳನ್ನು ನೀಡುವುದಲ್ಲದೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ಅಡಿಯಲ್ಲಿ ವಯೋಮಿತಿಯನ್ನು 21 ವರ್ಷದಿಂದ 26 ವರ್ಷಕ್ಕೆ ಏರಿಸಲಾಗಿದೆ ಎಂದು ಅವರು ಹೇಳಿದರು. ಹೂಡಿಕೆದಾರರಿಗೆ ಪ್ರೋತ್ಸಾಹ ನೀಡಲು ಖಾಸಗಿ ಸಂಸ್ಥೆ ಸೇವೆಯನ್ನು ಬಳಸಿ ಕೊಳ್ಳಲು ತೀರ್ಮಾನಿಸಿದ್ದು, ಬೋಸ್ಟನ್ ಕನ್ಸ್‍ಲೆಂಟ್ ಅಂತರರಾಷ್ಟ್ರೀಯ ಸಂಸ್ಥೆಗೆ ಒಂದು ವರ್ಷಕ್ಕೆ ಗುತ್ತಿಗೆ ಮುಂದುವರೆಸಲಾಗಿದೆ. ಇದಕ್ಕೆ 12 ಕೋಟಿ ರೂಪಾಯಿ ಸೇವಾ ಶುಲ್ಕ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದನ್ನು ಹಣಕಾಸು ಇಲಾಖೆ ಶಿಫಾರಸ್ಸು ಮಾಡಿದೆ ಎಂದರು.
ಕೋವಿಡ್ ಲಸಿಕೆ ಅಭಿವೃದ್ಧಿ
ನವದೆಹಲಿ, ಜು. 9: ಇಡೀ ವಿಶ್ವವೇ ಕೊರೊನಾ ಸಂಕಷ್ಟದಿಂದ ತತ್ತರಿಸಿ ಪುನರುಜ್ಜೀವನಕ್ಕೆ ಮುಂದಾಗುತ್ತಿರುವ ಸಂದರ್ಭದಲ್ಲಿ, ಭಾರತ ಆರ್ಥಿಕತೆ ಸೇರಿದಂತೆ ಎಲ್ಲ ಸವಾಲುಗಳಿಂದ ಸಹಜವಾಗಿ ಹೊರಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೋವಿಡ್ ಲಸಿಕೆ ಕಂಡುಹಿಡಿದ ನಂತರ ಅದನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸುಧಾರಣೆ ಮತ್ತು ಪುನರುಜ್ಜೀವನಗೊಳಿಸುವ ದೇಶದ ಸಾಮಥ್ರ್ಯದ ಬಗ್ಗೆ ಅದಮ್ಯ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ, ಭಾರತೀಯರು ನೈಸರ್ಗಿಕ ಸುಧಾರಕರು. ಸಾಮಾಜಿಕ ಅಥವಾ ಆರ್ಥಿಕತೆ ಸೇರಿದಂತೆ ಭಾರತವು ಪ್ರತಿ ಸವಾಲನ್ನು ಜಯಿಸಿದೆ ಎಂದು ಇತಿಹಾಸವು ತೋರಿಸಿದೆ ಎಂದಿದ್ದಾರೆ.