ಸೋಮವಾರಪೇಟೆ, ಜು.9: ಅಕ್ರಮವಾಗಿ ಶ್ರೀಗಂಧ ಮರವನ್ನು ಕಡಿದು ಸಾಗಾಟಗೊಳಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು, ತಲೆಮರೆಸಿಕೊಂಡ ಇತರ ನಾಲ್ವರು ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ.ತಾಲೂಕಿನ ಹೆಬ್ಬಾಲೆ ಶಾಖಾ ವ್ಯಾಪ್ತಿಯ ಚಿನ್ನೇನಹಳ್ಳಿ ಸಮೀಪದ, ಜೇನುಕಲ್ಲು ಬೆಟ್ಟದ ಮೀಸಲು ಅರಣ್ಯದಿಂದ ಶ್ರೀಗಂಧ ಮರವನ್ನು ಕಡಿದು ಸಾಗಿಸಲು ಯತ್ನಿಸಿದ ಪ್ರಕರಣವನ್ನು ಭೇದಿಸಿರುವ ಅರಣ್ಯ ಇಲಾಖೆ, 5ಲಕ್ಷ ರೂ. ಮೌಲ್ಯದ ಮರ, 10 ಲಕ್ಷ ಮೌಲ್ಯದ ವಾಹನ ಹಾಗೂ ಓರ್ವ ಆರೋಪಿಯನ್ನು ಬಂಧಿಸಿದೆ. ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿ, ಕುಶಾಲನಗರ ಸಮೀಪದ ದೊಡ್ಡಹೊನ್ನೂರು ಕೊಪ್ಪಲು ಗ್ರಾಮದ ಮಹಮ್ಮದ್ ಅವರ ಪುತ್ರ ಯೂಸುಫ್ ಎಂಬಾತನನ್ನು ಬಂಧಿಸಲಾಗಿದೆ. ಮೀಸಲು ಅರಣ್ಯದಲ್ಲಿದ್ದ ಶ್ರೀಗಂಧದ ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಕಾರ್ಯಾಚರಣೆ ಸಂದರ್ಭ ಪಿರಿಯಾಪಟ್ಟಣ ತಾಲೂಕಿನ ಬೈಲುಕೊಪ್ಪ ಸಮೀಪದ ಹಂದಿಗುಡ್ಡ ಗ್ರಾಮದ ಚಿಕ್ಕಲಕ್ಷ್ಮಣ, ಚಂದು, ದೊಡ್ಡಸ್ವಾಮಿ, ಹಮ್ಮಿಗೆ ಗ್ರಾಮದ ಬಸವರಾಜು ಅವರುಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

(ಮೊದಲ ಪುಟದಿಂದ) ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಮರಗಳ್ಳರ ತಂಡ ಜೇನುಕಲ್ಲುಬೆಟ್ಟ ಮೀಸಲು ಅರಣ್ಯದಲ್ಲಿ ಶ್ರೀಗಂಧ ಮರಗಳನ್ನು ಕಡಿದು, ಕೊರಡುಗಳನ್ನಾಗಿ ಪರಿವರ್ತಿಸಿ, ಕಾರಿಗೆ ತುಂಬಿಸುತ್ತಿದ್ದ ಸಂದರ್ಭ ಸೋಮವಾರಪೇಟೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಧಾಳಿ ಮಾಡಿದೆ.

ನಾಲ್ವರು ಆರೋಪಿಗಳು ಅರಣ್ಯದೊಳಗೆ ತಪ್ಪಿಸಿಕೊಂಡಿದ್ದಾರೆ. ಕಳ್ಳತನಕ್ಕೆ ಬಳಸಿದ್ದ 10ಲಕ್ಷ ರೂ. ಮೌಲ್ಯದ ಕೇರಳ ರಾಜ್ಯ ನೋಂದಣಿಯ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಕಾರಿನ ಮಾಲೀಕರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆರ್.ಎಫ್.ಓ ಕೆ.ಕೊಟ್ರೇಶ್ ತಿಳಿಸಿದ್ದಾರೆ.

ಬಂಧಿತ ಆರೋಪಿ ಯೂಸುಫ್‍ನನ್ನು ನ್ಯಾಯಾಧೀಶರ ಅನುಮತಿ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಸಿಎಫ್ ಕೆ.ಎ.ನೆಹರು ಅವರ ಮಾರ್ಗದರ್ಶನ ದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್.ಎಫ್.ಓ. ಕೊಟ್ರೇಶ್, ಡಿ.ಆರ್.ಎಫ್.ಒ ಎಂ.ಕೆ.ಭರತ್, ಅರಣ್ಯ ರಕ್ಷಕರಾದ ಲೋಕೇಶ್, ಶ್ರೀಕಾಂತ್, ವೀಕ್ಷಕರಾದ ರಾಜಪ್ಪ, ಸಿಬ್ಬಂದಿಗಳಾದ ಶಿವಪ್ಪ, ವರುಣ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.