ಕೂಡಿಗೆ, ಜು. 10: ಹಾರಂಗಿಯಲ್ಲಿರುವ ಮೀನುಗಾರಿಕೆ ಇಲಾಖೆಯ ವತಿಯಿಂದ ಮೀನು ಕೃಷಿಕರ ದಿನಾಚರಣೆ ಅಂಗವಾಗಿ ಹಾರಂಗಿ ಅಣೆಕಟ್ಟೆ ಮೂಲಕ ಹರಿಯುವ ಹಾರಂಗಿ ನದಿಗೆ 35 ಸಾವಿರಕ್ಕೂ ಹೆಚ್ಚು ಮಹಶೀರ್ ಮೀನಿನ ಮರಿಗಳನ್ನು ಬಿಡಲಾಯಿತು. ಸೋಮವಾರಪೇಟೆ ತಾಲೂಕು ಪಂಚಾಯತಿ ಸದಸ್ಯರಾದ ಗಣೇಶ್, ನದಿಗೆ ಮೀನು ಮರಿಗಳನ್ನು ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಹಾರಂಗಿ ಮೀನು ಮರಿ ಉತ್ಪಾದನಾ ಕೇಂದ್ರ ಸಹಾಯಕ ನಿರ್ದೇಶಕರಾದ ಸಚಿನ್ ಮಾತನಾಡಿ, ಕಳೆದ ವರ್ಷಗಳಿಂದ ಈವರೆಗೆ 35 ಸಾವಿರಕ್ಕೂ ಹೆಚ್ಚು ಮಹಶೀರ್ ಮೀನಿನ ಮರಿಗಳ ಉತ್ಪತ್ತಿ ಮಾಡಲಾಗಿದೆ. ಇಲಾಖೆಯ ನಿಯಮಾನುಸಾರ ಮಹಶೀರ್ ಮೀನು ಅಭಿವೃದ್ಧಿ ವ್ಯಾಪ್ತಿ ಪ್ರದೇಶಗಳಲ್ಲಿ ಮಾತ್ರ ಈ ಮೀನು ಮರಿಗಳನ್ನು ಬಿಡಲಾಗುತ್ತದೆ. ಈಗಾಗಲೇ ಹಾರಂಗಿಯಿಂದ ಕೂಡಿಗೆವರೆಗೆ ಇರುವ ಹಾರಂಗಿ ನದಿಯ ಪ್ರದೇಶವು ಮಹಷೀರ್ ಮೀನು ಅಭಿವೃದ್ಧಿ ಪ್ರದೇಶವಾಗಿದೆ. ಅದರಂತೆ ಕಾವೇರಿ ನದಿಯ ಕೆಲ ಭಾಗಗಳೂ ಮಹಶೀರ್ ಮೀನು ಅಭಿವೃದ್ಧಿ ಯೋಜನೆ ಪ್ರದೇಶಗಳಾಗಿವೆ. ಈ ಪ್ರದೇಶದಲ್ಲಿ ಮೀನು ಹಿಡಿಯದಂತೆ ನಿರ್ಬಂಧ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಈ ಭಾಗಗಳಲ್ಲಿ ಬೃಹತ್ ಗಾತ್ರದ ಮಹಷೀರ್ ಮೀನುಗಳಿವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದ ಮೀನುಗಾರಿಕೆ ಇಲಾಖೆಯ ಶ್ರೇಣಿ -1ರ ಸಹಾಯಕ ನಿರ್ದೇಶಕಿ ದರ್ಶನ್, ಹಾರಂಗಿ ಮೀನು ಮರಿ ಉತ್ಪಾದನಾ ಕೇಂದ್ರದ ಸಹಾಯಕ ನಿರ್ದೇಶಕ ಎಸ್.ಎಂ. ಸಚಿನ್, ಪೆÇನ್ನಂಪೇಟೆಯ ಸಹಾಯಕ ನಿರ್ದೇಶಕ ಮಹದೇವ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.