ಪಾಲಿಬೆಟ್ಟ, ಜು. 10: ಕೊರೊನಾ ವೈರಸ್ ಪತ್ತೆಯಾಗಿರುವ ಹುಂಡಿ ಗ್ರಾಮದಲ್ಲಿ ಹಲವು ದಿನಗಳಿಂದ ಜಿಲ್ಲಾಡಳಿತ ಸೀಲ್‍ಡೌನ್ ಮಾಡಿದೆ. ಕಾರ್ಮಿಕ ಕುಟುಂಬಗಳೇ ಅಧಿಕವಾಗಿರುವ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬಗಳು ಸಂಕಷ್ಟಕ್ಕೊಳಗಾಗಿರುವುದನ್ನು ಮನಗಂಡು ಕಾರುಣ್ಯ ಸಹಾಯ ನಿಧಿ ಸಂಘಟನೆ ಗ್ರಾಮದ 64 ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದೆ.

ಕಾರುಣ್ಯ ಸಹಾಯ ನಿಧಿ ಸಂಘಟನೆಯ ಕಾರ್ಯದರ್ಶಿ ಚೊಕ್ಕಂಡಹಳ್ಳಿ ಮಜೀದ್ ಮಾತನಾಡಿ, ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಮಹಾಮಾರಿ ವೈರಸ್‍ನಿಂದ ಜನ ಸಂಕಷ್ಟಕ್ಕೊಳಗಾಗಿದ್ದಾರೆ. ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಹುಂಡಿ ಗ್ರಾಮವನ್ನು ಹಲವು ದಿನಗಳಿಂದ ಸೀಲ್ ಡೌನ್ ಮಾಡಲಾಗಿದೆ.

ಗ್ರಾಮದಲ್ಲಿ ಕಾರ್ಮಿಕ ಕುಟುಂಬಗಳೇ ಅಧಿಕವಾಗಿದ್ದು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬಗಳಿಗೆ ಸರ್ಕಾರ ಆಹಾರ ಕಿಟ್ಟು ವಿತರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಅವರು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಾನಿಗಳು ನೆರವಾಗಬೇಕೆಂದರು. ಗ್ರಾಮ ಪಂಚಾಯಿತಿ ಸದಸ್ಯ ಸಜಿ ಥೋಮಸ್, ಕಾರುಣ್ಯ ಸಹಾಯನಿಧಿ ಸಂಘಟನೆಯ ಅಧ್ಯಕ್ಷ ನಜೀರ್ ಚಾಮಿಯಾಲ. ಸಮಿತಿಯ ಪ್ರಮುಖರಾದ ಅಬ್ದುಲ್ಲಾ ಹುಂಡಿ, ಕರೀಂ ಸಿದ್ದಾಪುರ, ನಜಿರ್ ಹೊಲಮಾಳ, ನೂರ್ ಚೊಕ್ಕಂಡಹಳ್ಳಿ ಗ್ರಾಮ ಪ್ರಮುಖರಾದ ಸಮೀರ್ ಸೇರಿದಂತೆ ಮತ್ತಿತರರು ಇದ್ದರು - ವರದಿ: ಪುತ್ತಂ ಪ್ರದೀಪ್