ನಾಪೋಕ್ಲು, ಜು. 10: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿಗೆ ಸಮೀಪದ ಬಲಮುರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಹಾಗೂ ಸಸಿ ನಾಟಿ ಶಾಲಾ ಆವರಣ ಸ್ವಚ್ಛತೆ ನಡೆಸಲಾಯಿತು. ವಾಟೆಕಾಡು ಒಕ್ಕೂಟದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅಧ್ಯಕ್ಷತೆಯನ್ನು ವಾಟೆಕಾಡು ಒಕ್ಕೂಟ ಅಧ್ಯಕ್ಷ ಶಿವರಾಂ ವಹಿಸಿದ್ದರು. ಬಲಮುರಿ ಶಾಲಾ ಮುಖ್ಯಶಿಕ್ಷಕಿ ಸುನಿತಾ ಗಿಡಕ್ಕೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿದರು.
ಮಡಿಕೇರಿ ತಾಲೂಕು ಕೃಷಿ ಅಧಿಕಾರಿ ಕೆ.ಚೇತನ್ ಮಾತನಾಡಿ ಉತ್ತಮ ಪರಿಸರವನ್ನು ನಿರ್ಮಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮೂರ್ನಾಡು ವಲಯದ ಮೇಲ್ವಿಚಾರಕಿ ಅನುಷಾ ರೈ, ಸೇವಾಪ್ರತಿನಿಧಿ ಕಾವೇರಿ, ದಿವ್ಯ, ಶಾಲಾ ಶಿಕ್ಷಕ ವೃಂದ, ವಾಟೆಕಾಡು ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಸಿ ವಿತರಿಸಲಾಯಿತು.