ಮಡಿಕೇರಿ, ಜು. 10: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಆಶಾಕಾರ್ಯಕರ್ತೆಯರು ತಾ.10 ರಿಂದ ಅನಿರ್ದಿಷ್ಟಾವಧಿವರೆಗೆ ಆರೋಗ್ಯ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕೊಡಗು ಜಿಲ್ಲಾ ಸಮಿತಿಯು ಇದಕ್ಕೆ ಬೆಂಬಲ ವ್ಯಕ್ತಪಡಿಸಿತು. ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಆಶಾ ಕಾರ್ಯಕರ್ತೆಯರಿಗೆ ಮಾಸಿಕ ರೂ.12,000 ಗೌರವಧನ ಖಾತರಿಪಡಿಸುವುದರೊಂದಿಗೆ ಕೊರೊನಾ ವಿರುದ್ಧದ ಹೋರಾಟಕ್ಕೆ ಅಗತ್ಯವಿರುವ ಸುರಕ್ಷಣಾ ಸಾಮಗ್ರಿಗಳನ್ನು ನೀಡುವುದಾಗಿಯು ಮನವಿಯಲ್ಲಿ ಒತ್ತಾಯಿಸಲಾಗಿದೆ. ಜನವರಿ ತಿಂಗಳಿನಿಂದ ಹಲವು ಬೇಡಿಕೆಗಳ ಈಡೇರಿಕೆಗೆ ಸರಕಾರವನ್ನು ಒತ್ತಾಯಿಸಿ ಹಲವು ಮನವಿಗಳನ್ನು ಸಲ್ಲಿಸಿದ್ದು, ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಆದ್ದರಿಂದ ಜುಲೈ 10 ರಿಂದ ಅನಿರ್ದಿಷ್ಟಾವಧಿವರೆಗೆ ರಾಜ್ಯ ಸೇರಿದಂತೆ ಕೊಡಗು ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರು ತಮ್ಮ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ನಿರ್ಧರಿಸಿದ್ದಾರೆ. ಡಿ.ಹೆಚ್.ಒ ಡಾ.ಮೋಹನ್ ಪರವಾಗಿ ಡಾ.ಗೋಪಿನಾಥ್ ಮನವಿ ಪತ್ರ ಸ್ವೀಕರಿಸಿದರು. ಈ ಸಂದರ್ಭ ಆಶಾಕಾರ್ಯಕರ್ತೆಯರಾದ ಸ್ವಾತಿ,ಬೇಬಿ, ಮಮತ, ನಾಗರತ್ನ, ಶಾಹಿದ ಹಾಗೂ ಸಮಿತಿ ಜಿಲ್ಲಾ ಅಧ್ಯಕ್ಷೆ ಪೂರ್ಣಿಮಾ ಹಾಜರಿದ್ದರು.