ಮಡಿಕೇರಿ, ಜು. 10: ಕೊಡಗು ಜಿಲ್ಲೆಯಲ್ಲಿ ಹೊಸದಾಗಿ 9 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ. ಒಟ್ಟು 131 ಪ್ರಕರಣಗಳಲ್ಲಿ 112 ಸಕ್ರಿಯವಾಗಿದ್ದು, ಎಲ್ಲರು ಚಿಕಿತ್ಸೆ ಪಡೆಯುತ್ತಿದ್ದಾರೆ. 18 ಮಂದಿ ಗುಣಮುಖರಾಗಿದ್ದು, ಒಬ್ಬರು ಮೃತರಾಗಿದ್ದಾರೆ.ಇಂದು ವೀರಾಜಪೇಟೆ ತಾಲೂಕಿನ ತಿತಿಮತಿಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 65 ವರ್ಷದ ಮಹಿಳೆ, 32 ವರ್ಷದ ಪುರುಷ, 45 ವರ್ಷದ ಪುರುಷ , 35 ವರ್ಷದ ಮಹಿಳೆ, 20 ವರ್ಷದ ಪುರುಷ, 19 ವರ್ಷದ ತರುಣ ಮತ್ತು 45 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಈ ತಾಲೂಕಿನ ಅಪ್ಪಯ್ಯ ಸ್ವಾಮಿ ರಸ್ತೆಯ ನಿವಾಸಿ ಜ್ವರ ಲಕ್ಷಣಗಳಿದ್ದ 55 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರು ಪ್ರಸ್ತುತ ಗೋಣಿಕೊಪ್ಪದಲ್ಲಿ ವಾಸವಿದ್ದಾರೆ. ಕುಟ್ಟ ಗ್ರಾಮದ ಜ್ವರ ಲಕ್ಷಣಗಳಿದ್ದ 34 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಹೊಸದಾಗಿ 3 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ. ಈ ಪೈಕಿ ವೀರಾಜಪೇಟೆಯ ಅಪ್ಪಯ್ಯಸ್ವಾಮಿ ರಸ್ತೆ, ಇಂದು ಸೇರ್ಪಡೆಯೊಂದಿಗೆ ಒಟ್ಟು 53 ಸ್ಥಳಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.