ಶನಿವಾರಸಂತೆ, ಜು. 9: ಸಾಮಥ್ರ್ಯಕ್ಕಿಂತ ಹೆಚ್ಚು ಭಾರದ ವಸ್ತುಗಳನ್ನು ತುಂಬಿಸಿಕೊಂಡು ಸಾರ್ವಜನಿಕ ರಸ್ತೆಯಲ್ಲಿ ಚಲಿಸುವ ವಾಹನಗಳ ಸಂಚಾರವನ್ನು ನಿಷೇಧ ಮಾಡಿರುವ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ ಲಾರಿ (ಕೆಎ-13 ಬಿ 2222) ಚಾಲಕನಿಗೆ ಮಡಿಕೇರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ರೂ. 11,400 ದಂಡ ವಿಧಿಸಿದ್ದಾರೆ.
ತಾ. 8 ರಂದು ರಾತ್ರಿ ಶನಿವಾರಸಂತೆ ಪೊಲೀಸ್ ಠಾಣೆಯ ಠಾಣಾಧಿಕಾರಿ ದೇವರಾಜ್ ಹಾಗೂ ಸಿಬ್ಬಂದಿಗಳು ಇಲಾಖಾ ಜೀಪಿನಲ್ಲಿ ಗಸ್ತಿನಲ್ಲಿದ್ದ ವೇಳೆ ಗುಡುಗಳಲೆ ರಸ್ತೆಯಲ್ಲಿ ಅಕ್ರಮವಾಗಿ ಕಾಡು ಮರದ ದಿಮ್ಮಿಗಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಹೊರ ಜಿಲ್ಲೆಗೆ ಸಾಗಾಟ ಗೋಚರಿಸಿದೆ. ಲಾರಿಯನ್ನು ತಡೆದು ಪರಿಶೀಲಿಸಿ, ಲಾರಿಯನ್ನು ವಶಪಡಿಸಿಕೊಂಡು ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿಗೆ ವರದಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ ಲಾರಿ ಮಾಲೀಕ ಅಬ್ದುಲ್ ಎಂಬವರಿಗೆ ರೂ. 11,400 ದಂಡ ವಿಧಿಸಲಾಗಿದೆ. ಲಾರಿ ಮಾಲೀಕ ದಂಡ ಪಾವತಿಸಿ ಶನಿವಾರಸಂತೆ ಠಾಣಾ ಸರಹದ್ದಿನಲ್ಲಿ ನಿಲ್ಲಿಸಲಾದ ಲಾರಿಯನ್ನು ಬಿಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ದೇವರಾಜ್, ಸಿಬ್ಬಂದಿಗಳಾದ ಬೋಪಣ್ಣ, ಶಫೀರ್, ವಿನಯ, ಪ್ರದೀಪ್, ಶಶಿಕುಮಾರ್ ಇತರರು ಪಾಲ್ಗೊಂಡಿದ್ದರು.