ಮಡಿಕೇರಿ, ಜು. 9: ಇಲ್ಲಿನ ಮಲ್ಲಿಕಾರ್ಜುನ ನಗರದ ಜನತಾ ಕಾಲೋನಿ ನಿವಾಸಿ ನಾಗಮ್ಮ ಎಂಬವರಿಗೆ ಸೇರಿದ ಮನೆಗೆ ಗಾಳಿ-ಮಳೆಯಿಂದ ಜಖಂ ಉಂಟಾಗಿದೆ. ಇಂದು ಬೆಳಗಿನ ಹೊತ್ತು 7.45ರ ಸುಮಾರಿಗೆ ಶಿಥಿಲಗೊಂಡಿದ್ದ ಗೋಡೆ ಬಿದ್ದು, ಮೇಲ್ಛಾವಣಿ ಶೀಟುಗಳು ಹಾನಿಗೊಂಡಿವೆ.ತಪ್ಪಿದ ಅಪಾಯ: 25 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಜನತಾಕಾಲೋನಿಯ ಬಹುತೇಕ ಮನೆಗಳು ಶಿಥಿಲಗೊಂಡಿವೆ. ನಾಗಮ್ಮ ಅವರಿಗೆ ಸೇರಿದ ಮನೆಕೂಡ ಶಿಥಿಲಗೊಂಡಿದ್ದು, ಗೋಡೆ ಬಿರುಕು ಬಿಟ್ಟಿತ್ತು. ಮಳೆ ಜೋರಾಗುತ್ತಿದ್ದಂತೆ ಮನೆಯಲ್ಲಿ ವಾಸವಿದ್ದ (ಮೊದಲ ಪುಟದಿಂದ) ನಾಗಮ್ಮ, ಪುತ್ರ ಕುಮಾರ್, ಪತ್ನಿ ಹಾಗೂ ಇಬ್ಬರು ಮಕ್ಕಳು ವಾರದ ಹಿಂದೆ ಮನೆಯನ್ನು ತೊರೆದು ಅಂಬೇಡ್ಕರ್ ಬಡಾವಣೆಯ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದರು. ಹಾಗಾಗಿ ಪ್ರಾಣಾಪಾಯ ತಪ್ಪಿದಂತಾಗಿದೆ.

ಸ್ಪಂದಿಸದ ನಗರಸಭೆ: 25 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಜನತಾ ಕಾಲೋನಿಯ ಮನೆಗಳು ಶಿಥಿಲಗೊಂಡಿವೆ. ನಾಗಮ್ಮ ಅವರ ಮನೆಯ ಬಳಿಯ ಗಂಗಾಧರ್ ಹಾಗೂ ಲೀಲ ಎಂಬವರುಗಳಿಗೆ ಸೇರಿದ ಮನೆಗಳು ಕೂಡ ಅಪಾಯದ ಸ್ಥಿತಿಯಲ್ಲಿವೆ. ದುಸ್ಥಿತಿಯ ಬಗ್ಗೆ ನಗರಸಭೆಗೆ ಹಲವು ಬಾರಿ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ. ಅಲ್ಲದೆ ಶೇ. 25ರ ಮೀಸಲಾತಿ ಯೋಜನೆಯಡಿ ವಸತಿ ಸೌಕರ್ಯಕ್ಕೆ ಅರ್ಜಿ ಸಲ್ಲಿಸಿದರೂ ಇದುವರೆಗೆ ನಗರಸಭೆ ಯಾವುದೇ ರೀತಿಯ ಸ್ಪಂದನ ನೀಡಿಲ್ಲವೆಂದು ಅಲ್ಲಿನ ನಿವಾಸಿಗಳು ಅವಲತ್ತುಕೊಂಡಿದ್ದಾರೆ. ಇದೀಗ ಈ ಮಳೆಗಾಲದಲ್ಲಿ ಇನ್ನಷ್ಟು ಮನೆಗಳಿಗೆ ಹಾನಿಯಾಗುವ ಸಂಭವವಿದ್ದು, ನಗರಸಭೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಪ್ರಾಣಾಪಾಯ ಉಂಟಾಗುವ ಸಾಧ್ಯತೆಯಿದೆಯೆಂದು ನಿವಾಸಿಗಳಾದ ನಾಗಮ್ಮ, ನಾಗರಾಜು, ಕುಮಾರ್, ಇನ್ನಿತರರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಪರಿಶೀಲನೆ: ಘಟನೆ ಸ್ಥಳಕ್ಕೆ ತಡವಾಗಿ ಭೇಟಿ ನೀಡಿದ ನಗರಸಭೆ ಸಿಬ್ಬಂದಿ ಹಾಗೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಆ ವಿಭಾಗದ ನಗರಸಭಾ ಮಾಜಿ ಸದಸ್ಯೆ ಲೀಲಾ ಶೇಷಮ್ಮ ಅವರು ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಚಿತ್ರಗಳು: ಲಕ್ಷ್ಮೀಶ್