ಶ್ರೀಮಂಗಲ, ಜು. 10: ಕೋವಿಡ್ 19 ಸಮಸ್ಯೆ ಉದ್ಭವಗೊಂಡು ಲಾಕ್‍ಡೌನ್ ಆದ ಸಂದರ್ಭ ಕುಟ್ಟ ಸಮೀಪದಲ್ಲಿ ಕೇರಳ-ಕರ್ನಾಟಕ ಗಡಿ ರಸ್ತೆಯನ್ನು ಪೋಲಿಸ್ ಇಲಾಖೆಯ ವತಿಯಿಂದ ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿದು ಬೇಲಿ ನಿರ್ಮಿಸಿ ಬಂದ್ ಮಾಡಲಾದ ಸ್ಥಳವನ್ನು ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಪರಿಶೀಲಿಸಿದರು.

ಈ ಭಾಗದಲ್ಲಿ ವಿಪರೀತ ಆನೆ ಹಾವಳಿ ಇದ್ದು, ಪೊಲೀಸ್ ಸಿಬ್ಬಂದಿಗಳಿಗೆ ರಾತ್ರಿ ವೇಳೆ ರಸ್ತೆ ಬಂದ್ ಮಾಡಿರುವ ಜಾಗದಲ್ಲಿ ವಾಸ್ತವ್ಯ ಹೂಡಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ಕೆಲವರು ಒಳ ನುಸುಳುವ ಮಾಹಿತಿ ಬಂದಿದ್ದು, ಈ ಬಗ್ಗೆ ಪರಿಶೀಲನೆ ಮಾಡಲು ಬಂದಿರುವುದಾಗಿ ತಿಳಿಸಿದರು.

ಈ ಸಂದರ್ಭ ಹಾಜರಿದ್ದ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ ಹಾಗೂ ಸಿಬ್ಬಂದಿಗಳು ವರಿಷ್ಠಾಧಿಕಾರಿಗಳಿಗೆ ತಮ್ಮ ಸಮಸ್ಯೆ ಬಗ್ಗೆ ಮನವಿ ಮಾಡಿಕೊಂಡರು. ಸಮಸ್ಯೆ ಆಲಿಸಿದ ಕ್ಷಮಾಮಿಶ್ರಾ ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು. ಕೋವಿಡ್ 19 ತಡೆಗಟ್ಟುವ ವಿಚಾರದಲ್ಲಿ ಪೊಲೀಸ್ ಇಲಾಖೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲಾಖೆಯ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭ ಹಾಜರಿದ್ದ ಎನ್‍ಡಿಆರ್‍ಎಫ್ ತಂಡದವರಿಗೆ ತಮ್ಮ ಕಾರ್ಯ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು.