ಸಿದ್ದಾಪುರ, ಜು. 9: ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಳತ್ಮಾಡು ಗ್ರಾಮದ ಗೊಟ್ಟಡ ಬಳಿ ನಡೆದಿದೆ.
ಗೊಟ್ಟಡ ಕಾಲೋನಿ ನಿವಾಸಿ ಚಾತ ಎಂಬಾತ ಕಾಫಿ ತೋಟವೊಂದರಲ್ಲಿ ಕೆಲಸಕ್ಕೆ ತೆರಳಿ ಮನೆಗೆ ಹಿಂತಿರುಗಿ ಬರುವ ಸಂದರ್ಭ ಒಂಟಿಸಲಗ ಏಕಾಏಕಿ ದಾಳಿ ನಡೆಸಿದೆ. ದಾಳಿಯಿಂದಾಗಿ ಚಾತನ ಎದೆ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಆತನನ್ನು ಸ್ಥಳೀಯರು ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ವೀರಾಜಪೇಟೆ ಉಪವಲಯ ಅರಣ್ಯಾಧಿಕಾರಿ ಮೋಹನ್ ಹಾಗೂ ಅರಣ್ಯ ರಕ್ಷಕ ಚಂದ್ರದಾಸ್ ಸೇರಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಲ್ವತ್ತೋಕ್ಲು, ಕೊಳತೋಡು, ಬೈಗೋಡು, ಕಳತ್ಮಾಡು, ಗೊಟ್ಟಡ, ಹೊಸ್ಕೋಟೆ, ಹೊಸೂರು, ಬಿಳುಗುಂದ ಭಾಗದಲ್ಲಿ ರಾತ್ರಿ ಸಮಯದಲ್ಲಿ 8ಕ್ಕೂ ಅಧಿಕ ಕಾಡಾನೆಗಳು ಬೆಳಗ್ಗಿನ ಜಾವದವರೆಗೂ ಸುತ್ತಾಡುತ್ತಿದ್ದು, ಈ ಹಿನ್ನೆಲೆ ಗ್ರಾಮಸ್ಥರು ಆ ಭಾಗದಲ್ಲಿ ಎಚ್ಚರಿಕೆ ವಹಿಸಬೇಕೆಂದು ಉಪವಲಯ ಅರಣ್ಯಾಧಿಕಾರಿ ಮೋಹನ್ ತಿಳಿಸಿದ್ದಾರೆ.