ಶನಿವಾರಸಂತೆ, ಜು. 10: ಮುಂಬೈನ ದಾದರ್‍ನಲ್ಲಿರುವ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಮನೆ ‘ರಾಜ ಗೃಹ’ದ ಮೇಲೆ ನಡೆದಿರುವ ಕಲ್ಲು ತೂರಾಟ ದುಷ್ಕøತ್ಯವನ್ನು ಜಿಲ್ಲಾ ದ.ಸಂ.ಸ. ತೀವ್ರವಾಗಿ ಖಂಡಿಸುತ್ತದೆ ಎಂದು ದ.ಸಂ.ಸ. ಜಿಲ್ಲಾ ಸಂಯೋಜಕ ಜೆ.ಆರ್. ಪಾಲಾಕ್ಷ, ಶನಿವಾರಸಂತೆ ದ.ಸಂ.ಸ. ಮುಖಂಡ ಶಿವಶಂಕರ್, ದ.ಸಂ.ಸ. ಹೋಬಳಿ ಅಧ್ಯಕ್ಷರುಗಳಾದ ಎಸ್.ಎಸ್. ಶಿವಲಿಂಗ, ಮಂಜಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಡಾ. ಅಂಬೇಡ್ಕರ್ ಅವರ ವಾಸದ ಮನೆ ರಾಜಗೃಹದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಧ್ವಂಸಗೊಳಿಸಿರುವ ಪ್ರಕರಣವನ್ನು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಅನಂತ್‍ಕುಮಾರ್, ಈ ಪ್ರಕರಣದ ಎಲ್ಲಾ ಆರೋಪಿಗಳು ಮತ್ತು ಕೃತ್ಯಕ್ಕೆ ಕುಮುಕು ಕೊಟ್ಟವರನ್ನು ಬಂಧಿಸಬೇಕು ಇಲ್ಲದಿದ್ದಲ್ಲಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಉಗ್ರ್ರ ಹೋರಾಟ ಮಾಡುವದಾಗಿ ಎಚ್ಚರಿಸಿದರು.

ಈ ಪ್ರಕರಣವನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಸುರೇಶ್ ಹೇಳಿದರು. ಗೋಷ್ಠಿಯಲ್ಲಿ ಸೋಮವಾರಪೇಟೆ ತಾಲೂಕು ದಲಿತ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜನಾರ್ಧನ್ , ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ವೀರೇಂದ್ರಕುಮಾರ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಮಿತಿ ಸದಸ್ಯ ಶಾಯಿದ್‍ಖಾನ್, ಜಿಲ್ಲಾ ಯೂತ್ ಕಾಂಗ್ರೆಸ್ ಸದಸ್ಯ ಇಂದ್ರೇಶ್ ಹಾಜರಿದ್ದರು.

ಮಡಿಕೇರಿ : ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುತ್ತಿರುವ ಸರ್ಕಾರ ಕ್ರಮವನ್ನು ಖಂಡಿಸಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಧ್ವಂಸ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಕರ್ನಾಟಕ ದ.ಸಂ.ಸ. ಕೊಡಗು ಜಿಲ್ಲಾ ಘಟಕ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ.

ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಅವರ ನೇತೃತ್ವದಲ್ಲಿ ಮನವಿ ಪತ್ರ ನೀಡುವ ಸಂದರ್ಭ ಸಮಿತಿಯ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ಮಡಿಕೇರಿ ತಾಲೂಕು ಸಂಚಾಲಕ ಎ.ಪಿ. ದೀಪಕ್, ಮಡಿಕೇರಿ ನಗರ ಸಂಚಾಲಕ ಟಿ.ಪಿ. ಸಿದ್ದೇಶ್ವರ, ವೀರಾಜಪೇಟೆ ತಾಲೂಕು ಸಂಘಟನಾ ಸಂಚಾಲಕ ಹೆಚ್.ಎಂ. ಮಹದೇವ ಹಾಜರಿದ್ದರು.