* ಗೋಣಿಕೊಪ್ಪಲು, ಜು. 10: ತಿತಿಮತಿ ಭಾಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ನಿಯಂತ್ರಣ ಮಾಡುವುದಕ್ಕಾಗಿ ಗ್ರಾಮ ಪಂಚಾಯಿತಿಯಿಂದ ಗ್ರಾಮದ ಮುಖ್ಯ ರಸ್ತೆ ಹಾಗೂ ವಿವಿಧ ಬಡಾವಣೆಗಳಲ್ಲಿ ಔಷಧಿ ಸಿಂಪಡಿಸಿತು. ಪಂಚಾಯಿತಿ ಆಡಳಿತಾಧಿಕಾರಿ ಶ್ರೀಪತಿ, ಪಿಡಿಒ ಮಮತಾ ಜಗದೀಶ್ ನೇತೃತ್ವದಲ್ಲಿ ಸಿಬ್ಬಂದಿಗಳು ಬೆಳಗ್ಗಿನಿಂದ ಮಧ್ಯಾಹ್ನವರೆಗೆ ರಸ್ತೆ, ಚರಂಡಿ, ಬಸ್ ನಿಲ್ದಾಣ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಔಷಧಿ ಸಿಂಪಡಿಸಿದರು.
ಗೋಣಿಕೊಪ್ಪಲು ಪಟ್ಟಣದ ಎಂಎಂ ಬಡಾವಣೆಯಲ್ಲಿ ಮತ್ತೊಂದು ಹೊಸ ಪ್ರಕರಣ ಶುಕ್ರವಾರ ಪತ್ತೆಯಾಗಿದ್ದು ಈ ಭಾಗವನ್ನು ತಹಶೀಲ್ದಾರ್ ನಂದೀಶ್ ಸೀಲ್‍ಡೌನ್ ಮಾಡಿದರು. ಈ ಹಿಂದೆ ಕಾಣಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಇಬಿ ಕಚೇರಿ ಹಿಂಬದಿ ರಸ್ತೆ, ಹರಿಶ್ಚಂದ್ರಪುರ, ನೇತಾಜಿ ಬಡಾವಣೆಯಲ್ಲಿನ ಸಂರ್ಪಕ ನಿಷೇಧ ಎಂದಿನಂತೆ ಮುಂದುವರಿದಿದೆ.
ಕೂಡಿಗೆ : ಕೂಡಿಗೆ ಗ್ರಾಮ ಪಂಚಾಯಿತಿ ಕಚೇರಿಗೆ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಬಂದಿದ್ದರು ಎಂದು ಸಾರ್ವಜನಿಕರು ಹೇಳುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಯಿತು. ಕೂಡಿಗೆ ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಯಾರು ಪ್ರವೇಶಿಸದ ಹಾಗೆ ಹಗ್ಗವನ್ನು ಕಟ್ಟಿ ಮುಚ್ಚಲಾಗಿತ್ತು.
ವೀರಾಜಪೇಟೆ: ವೀರಾಜಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಮುಖ್ಯರಸ್ತೆ ಸೇರಿದಂತೆ ಪಟ್ಟಣದಾದ್ಯಂತ ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ತಾ. 12ರಂದು (ನಾಳೆ) ಬೆಳಿಗ್ಗೆ ಔಷಧ ಸಿಂಪಡಣೆ ಮಾಡಲಿರುವುದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ. ಪಟ್ಟಣದಲ್ಲಿ ಔಷಧ ಸಿಂಪಡಣೆಗೆ ವರ್ತಕರು, ಸಾರ್ವಜನಿಕರು ಸಹಕರಿಸುವಂತೆ ಅವರು ಕೋರಿದ್ದಾರೆ.