ಸೋಮವಾರಪೇಟೆ, ಜು. 8: ಕೊರೊನಾ ಸೋಂಕು ಪತ್ತೆಯಾದ ಪ್ರದೇಶಗಳನ್ನು ಕಂಟೈನ್‍ಮೆಂಟ್ ಏರಿಯಾ ಎಂದು ಘೋಷಿಸಲಾಗಿದ್ದರೂ ಅಲ್ಲಿನ ಸಾರ್ವಜನಿಕರಿಗೆ ಸರ್ಕಾರದಿಂದ ಅಗತ್ಯ ಸವಲತ್ತುಗಳನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿರುವ ಬ್ಲಾಕ್ ಕಾಂಗ್ರೆಸ್, ಈ ಬಗ್ಗೆ ಶಾಸಕರು ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಎಲ್ಲೆಡೆ ಸೀಲ್‍ಡೌನ್‍ನಿಂದ ಕಾರ್ಮಿಕರು ಸಂಕಷ್ಟ್ಟಕ್ಕೆ ಸಿಲುಕಿದ್ದಾರೆ. ಆದರೂ ಸರ್ಕಾರದಿಂದ ಸ್ಪಂದನೆಯಿಲ್ಲ. ಜಿಲ್ಲೆಯ ಶಾಸಕರುಗಳು ಬಡಜನರ ಪರವಾಗಿ ಕಾರ್ಯನಿರ್ವಹಿಸಬೇಕು. ಸೀಲ್‍ಡೌನ್ ಏರಿಯಾದಲ್ಲಿ ಆಹಾರ ಕಿಟ್ ವಿತರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕೆ.ಎ. ಯಾಕೂಬ್, ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಬಸವರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕೆ.ಜೆ. ಸುನಿಲ್, ಮಡಿಕೇರಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಅವರುಗಳು ಉಪಸ್ಥಿತರಿದ್ದರು.