ಮಡಿಕೇರಿ, ಜು. 7: ಇಂದು ತಲಕಾವೇರಿ-ಭಾಗಮಂಡಲ ವಿಭಾಗದಲ್ಲಿ ಭಾರೀ ಮಳೆಯಾಗಿದ್ದು, ತಲಕಾವೇರಿ-ಭಾಗಮಂಡಲದ ನಡುವೆ ಪ್ರಾಕೃತಿಕ ವೀಕ್ಷಣಾ ಸ್ಥಳದ ಬಳಿ ಭಾರೀ ಭೂಕುಸಿತ ಉಂಟಾಗಿದ್ದು, ತಲಕಾವೇರಿಗೆ ಸಂಪರ್ಕ ಸ್ಥಗಿತ ಗೊಂಡಿತ್ತು.ಅಲ್ಲದೆ ತಲಕಾವೇರಿಯಿಂದ ಚೇರಂಗಾಲಕ್ಕೆ ತೆರಳುವ ರಸ್ತೆಯು ಭೂಕುಸಿತ ಉಂಟಾಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಫಯರ್ ಬ್ರಿಗೇಡ್ ಹಾಗೂ ಎನ್‍ಡಿಆರ್‍ಎಫ್ ತಂಡಗಳನ್ನು ಸ್ಥಳಕ್ಕೆ ತ್ವರಿತವಾಗಿ ಕಳುಹಿಸಿರುವುದಾಗಿ ತಿಳಿಸಿದರು. ಎನ್‍ಡಿಆರ್‍ಎಫ್ ತಂಡ ದಿಂದ ರಸ್ತೆ ಸಂಚಾರವನ್ನು ಸುಗಮ ಗೊಳಿಸುವ ಕಾರ್ಯ ಬಿರುಸಿನಿಂದ ನಡೆದು ಕುಸಿದಿದ್ದ ಮಣ್ಣನ್ನು ತೆರವುಗೊಳಿಸಲಾಯಿತು.ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ಅನನ್ಯ ವಾಸುದೇವ್ ನೇತೃತ್ವದಲ್ಲಿ ಠಾಣಾಧಿಕಾರಿ ಮಹದೇವ್, ಪಿಡಿಓ ಅಶೋಕ್ ಮುಂದಾಳತ್ವದಲ್ಲಿ ಎನ್‍ಡಿಆರ್‍ಎಫ್ ತಂಡದವರು ಮಣ್ಣನ್ನು ತೆರವು ಗೊಳಿಸಿದರು. ಇದೀಗ ಮಾರ್ಗದ ಮೂಲಕ ಎಚ್ಚರಿಕೆಯ ಸೂಚನೆ ಯೊಂದಿಗೆ ಸಣ್ಣ ವಾಹನಗಳು ಸಂಚರಿಸಲು ಅವಕಾಶ ಕಲ್ಪಸಲಾಗಿದೆ. ಮತ್ತೊಂದೆಡೆ ರಸ್ತೆ ಬಿರುಕು ಬಿಟ್ಟಿದ್ದು, ಬ್ಯಾರಿಕೇಡ್ ಅಳವಡಿಸಲಾಗಿದೆ.

ಈ ನಡುವೆ ಭಾಗಮಂಡಲ ದಲ್ಲಿಯೂ ನಿರಂತರ ಮಳೆಯಾ ಗುತ್ತಿದ್ದು, ಸಂಗಮದಲ್ಲಿ ನೀರಿನ ಏರಿಕೆ ಕಂಡುಬಂದಿದೆ. ನಾಪೋಕ್ಲು ರಸ್ತೆಯಲ್ಲಿ ಕಾವೇರಿ ನದಿ ಎರಡು ಅಡಿ ಮೇಲ್ಮಟ್ಟಕ್ಕೆ ಬಂದಿದ್ದು, ಅಯ್ಯಂಗೇರಿಯಲ್ಲಿ 3 ಅಡಿಗೂ ಅಧಿಕ ನೀರು ಹರಿಯುತ್ತಿದೆ. ಮಳೆ ಜಾಸ್ತಿ ಯಾದರೆ ಈ ಎರಡೂ ರಸ್ತೆಗಳ ಸಂಪರ್ಕ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಕಳೆದ 24 ಗಂಟೆಯಲ್ಲಿ ತಲಕಾವೇರಿ ವ್ಯಾಪ್ತಿಗೆ 9.12 ಇಂಚು ಮಳೆ ಸುರಿದಿದೆ. ಭಾಗಮಂಡಲದಲ್ಲಿ ಸುಮಾರು 6 ಇಂಚು ಮಳೆ ಸುರಿದಿದೆ. ಭಾಗಮಂಡಲಕ್ಕೆ ಪ್ರಸಕ್ತ ವರ್ಷ ಇದುವರೆಗೆ 74 ಇಂಚು ಮಳೆ ಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 42 ಇಂಚು ಮಳೆಯಾಗಿದ್ದು, ಈ ವರ್ಷ 32 ಇಂಚು ಅಧಿಕ ಮಳೆ ಯಾಗಿದೆ. ಆದರೆ, 2018ರ ಅವಧಿ ಯಲ್ಲಿ 106 ಇಂಚು ಮಳೆಯಾಗಿತ್ತು.

ಹಾರಂಗಿಯಲ್ಲಿ ಇನ್ನು 8 ಅಡಿ ಮಾತ್ರ ಬಾಕಿ

ಈ ನಡುವೆ ಹಾರಂಗಿ ಜಲಾಶಯದಲ್ಲೂ ಕೂಡ ನೀರಿನ ಮಟ್ಟ ಏರಿಕೆಗೊಳ್ಳುತ್ತಿದೆ. ಇದೀಗ 2859 ಅಡಿ ತಲುಪಲು ಇನ್ನು ಕೇವಲ 8 ಅಡಿ ಮಾತ್ರ ಬಾಕಿ ಇದೆ. ಒಳಹರಿವು 903 ಕ್ಯೂಸೆಕ್ಸ್‍ಗಳಷ್ಟಿದೆ ಎಂದು ಅಣೆಕಟ್ಟೆಯ

(ಮೊದಲ ಪುಟದಿಂದ) ಇಂಜಿನಿಯರ್ ನಾಗರಾಜ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಕರಿಕೆಯಲ್ಲಿ ಬಿದ್ದ ಮರ

ಕೊಡಗು-ಕೇರಳ ಗಡಿ ಪ್ರದೇಶವಾದ ಕರಿಕೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆ-ಗಾಳಿಯಿಂದಾಗಿ ಚೆತ್ತುಕಾಯದ ಬಳಿ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಹಲವು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಅರಣ್ಯ ಇಲಾಖೆ ವತಿಯಿಂದ ಮರವನ್ನು ತೆರವುಗೊಳಿಸಲಾಯಿತು.

ಟವರ್ ಕೆಳಗಿನ ಬರೆ ಕುಸಿತ

ಮಡಿಕೇರಿ ನಗರದ ಆಕಾಶವಣಿ ಟವರ್ ಕೆಳಗೆ ಬರೆ ಕುಸಿತ ಸಂಭವಿಸಿದೆ. ಮಧ್ಯಾಹ್ನ ವೇಳೆ ನಗರದಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದು, ಸಣ್ಣ ಪ್ರಮಾಣದ ಬರೆ ಕುಸಿತ ಉಂಟಾಗಿದೆ. ಇಲ್ಲಿ 8 ಮಂದಿ ಕಾರ್ಮಿಕರು ತಡೆಗೋಡೆ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದು, ಇವರುಗಳಿಗೆ ಯಾವುದೇ ಅಪಾಯ ಉಂಟಾಗಿಲ್ಲ.

ನಾಪೆÇೀಕ್ಲು ವ್ಯಾಪ್ತಿಯಲ್ಲಿ ನಾಟಿ ಕಾರ್ಯಕ್ಕೆ ಚಾಲನೆ

ದೇಶದ ಬೆನ್ನೆಲುಬಾದ ರೈತ ತನ್ನ ಕೃಷಿ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾನೆ. ಕೊರೊನಾ ಭೀತಿಯ ನಡುವೆಯೂ ಭತ್ತದ ನಾಟಿಗಾಗಿ ಗದ್ದೆ ಉಳುಮೆ ಮಾಡಿ, ಭತ್ತದ ಸಸಿಮಡಿಯೊಂದಿಗೆ ಹಿಂದಿನಿಂದಲೂ ಸಾಂಪ್ರದಾಯಿಕ ಕೃಷಿ ಮಾಡಿಕೊಂಡು ಬಂದಿರುವ ರೈತರು ಮಾತ್ರ ಭತ್ತದ ಕೃಷಿಯನ್ನು ಉಳಿಸಿಕೊಂಡು ಬಂದಿದ್ದಾರೆ.

ಕೊಳಕೇರಿ ಗ್ರಾಮದ ಪ್ರಗತಿಪರ ಕೃಷಿಕ ಅಪ್ಪಾರಂಡ ಸುಧೀರ್ ಅಯ್ಯಪ್ಪ ಕೃಷಿ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸುಮಾರು ಆರು ಏಕರೆ ಭತ್ತದ ನಾಟಿ ಕಾರ್ಯ ಕೈಗೊಂಡಿರುವ ಇವರು ಭತ್ತದ ಕೃಷಿಯನ್ನು ಕೈಬಿಟ್ಟರೆ ಕೊಡಗಿನ ಸಂಸ್ಕøತಿ ಉಳಿಯಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳುತ್ತಾರೆ.

ಇವರ ಭತ್ತದ ಗದ್ದೆಯಲ್ಲಿ ಸಂತಸದಿಂದ ಪೈರು ಕೀಳುತ್ತಿರುವ ಮಹಿಳೆಯರು ಹಾಗೂ ಗದ್ದೆಯಲ್ಲಿ ಹಾಸ್ಯ ಚಟಾಕಿಯೊಂದಿಗೆ ನಾಟಿ ಮಾಡುತ್ತಿರುವ ದೃಶ್ಯ ದಾರಿಹೋಕರ ಮನ ಸೆಳೆಯುತ್ತಿತ್ತು. ಇಂತಹ ಸುಂದರ ಸನ್ನಿವೇಶಗಳನ್ನು ಇತ್ತೀಚಿಗೆ ಕಾಣಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾತುಗಳು ಜನವಲಯದಲ್ಲಿ ಕೇಳಿಬರುತ್ತಿತ್ತು. ಒಟ್ಟಿನಲ್ಲಿ ರೈತ ದೇಶದ ಬೆನ್ನೆಲುಬು ಎಂಬುದಕ್ಕೆ ಇದು ಸಾಕ್ಷಿಯಂತಿತ್ತು.

ಜಿಲ್ಲೆಯ ಮಳೆ ವಿವರ

ಜಿಲ್ಲೆಯಲ್ಲಿ ಸರಾಸರಿ 1.50 ಇಂಚು ಮಳೆಯಾಗಿದ್ದು, ವರ್ಷಾರಂಭದಿಂದ ಇದುವರೆಗೆ ಸರಾಸರಿ 20.20 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಗೆ 17.20 ಇಂಚು ಮಳೆಯಾಗಿತ್ತು.

ಕಳೆದ 24 ಗಂಟೆಗಳಲ್ಲಿ ಮಡಿಕೇರಿಗೆ 2.25 ಇಂಚು ವೀರಾಜಪೇಟೆ 1.09 ಇಂಚು, ಸೋಮವಾರಪೇಟೆ 1.15 ಇಂಚು ಮಳೆಯಾಗಿದೆ. ಇನ್ನುಳಿದಂತೆ ನಾಪೋಕ್ಲು 1.96 ಇಂಚು, ಸಂಪಾಜೆ 1, ಹುದಿಕೇರಿ 1, ಶ್ರೀಮಂಗಲ 2.10 ಇಂಚು, ಪೊನ್ನಂಪೇಟೆ 0.92 ಇಂಚು, ಅಮ್ಮತ್ತಿ 0.35 ಹಾಗೂ ಬಾಳೆಲೆ 0.70 ಇಂಚು ಮಳೆಯಾಗಿದೆ.

ಉತ್ತರ ಕೊಡಗಿನ ಶನಿವಾರಸಂತೆ 1, ಕೊಡ್ಲಿಪೇಟೆ 1.33, ಕುಶಾಲನಗ 0.14, ಸುಂಟಿಕೊಪ್ಪ 0.78 ಇಂಚು ಹಾಗೂ ಹಾರಂಗಿ ವ್ಯಾಪ್ತಿಯಲ್ಲಿ 0.14 ಇಂಚು ದಾಖಲಾಗಿದೆ.

ವರದಿ: ಕೆ.ಡಿ. ಸುನಿಲ್, ಸುಧೀರ್, ಪ್ರಭಾಕರ್, ನಾಗರಾಜಶೆಟ್ಟಿ