ಮಡಿಕೇರಿ, ಜು. 8: ಕೊಡಗಿನಲ್ಲಿ ಹಲವು ವರ್ಷಗಳಿಂದ ತಲೆದೋರಿ ರುವ ಸಮಸ್ಯೆಯೆಂದರೆ ವನ್ಯಪ್ರಾಣಿಗಳ ಉಪಟಳ. ಹಲವು ಕಡೆಗಳಲ್ಲಿ ಯಾವಾಗಲೂ ಕೇಳಿ ಬರುವ ಸಮಸ್ಯೆಯಾಗಿದೆ.
ಸೋಮವಾರಪೇಟೆ ತಾಲೂಕಿನ ಚೆಟ್ಟಳ್ಳಿ ಸಮೀಪದ ಪೊನ್ನತ್‍ಮೊಟ್ಟೆ ಯಲ್ಲಿ ಕಾಡಾನೆಗಳ ಕಾಟ ಹೇಳತೀರದಂತಾಗಿದೆ. ಸಮೀಪದಲ್ಲೇ ಅರಣ್ಯ ಪ್ರದೇಶವಿರುವುದರಿಂದ ಸಂಜೆಯಾಗುತ್ತಲೇ ಪ್ರತಿದಿನವೂ ಕಾಡಾನೆಗಳು ಆಹಾರ ಹರಸಿ ಪೊನ್ನತ್‍ಮೊಟ್ಟೆಯ ಮೇಚನಮನೆ, ಹೊಸಮನೆಯವರುಗಳ ತೋಟಗಳಿಗೆ ಲಗ್ಗೆಯಿಡುತ್ತವೆ. ಈ ಮನೆಗಳಿಂದ ಸ್ವಲ್ಪ ಮುಂದೆ ಸಾಗಿದರೆ ನೂರಾರು ಮನೆಗಳಿವೆ. ಯಾವ ಕ್ಷಣದಲ್ಲಿ ಯಾವ ಅಪಾಯ ಬಂದೆರಗುವುದೋ ಎಂಬದು ಇಲ್ಲಿನ ನಿವಾಸಿಗಳ ಅಳಲಾಗಿದೆ.
ಇಲ್ಲಿಯ ತೋಟಗಳಿಗೆ ಕಾಲಿಡುವ ಕಾಡಾನೆಗಳು ಹಲಸಿನ ಹಣ್ಣು, ಸಪೋಟ, ಬಾಳೆಗಿಡಗಳು ಮತ್ತು ಗದ್ದೆಯಲ್ಲಿ ಸಿಕ್ಕಂತಹ ಆಹಾರ ಸೇವಿಸಿ ಕಾಫಿ ಗಿಡ, ತೆಂಗಿನಮರ, ಅಡಿಕೆ ಮರಗಳನ್ನೆಲ್ಲ ಧ್ವಂಸಗೊಳಿಸುತ್ತಿವೆ ಹಾಗೂ ಇವರುಗಳ ತೋಟದ ಬದಿಯಲ್ಲೇ ಇರುವ ಹೊಳೆಯಲ್ಲೇ ಸಾಗಿ ಅಲ್ಲಿನ ಮನೆಗಳಿಗಿರುವ ತಡೆಗೋಡೆಯನ್ನು ಧ್ವಂಸಗೊಳಿಸುತ್ತಿವೆ.
ರಾತ್ರಿ 10 ಗಂಟೆಗೆಲ್ಲ ಕಾಲಿಡುವ ಕಾಡಾನೆಗಳು ದಾರಿಯಲ್ಲೇ ಬಂದು ಮಾವು ಮತ್ತು ಹಲಸಿನ ಮರವನ್ನು ಅಲುಗಾಡಿಸಿ ಹಣ್ಣು ತಿಂದ ನಂತರ ಮನೆಯಂಗಳದಲ್ಲೇ ಬಂದು ಘೀಳಿಡುತ್ತಾ ಸಿಕ್ಕಿದನ್ನೆಲ್ಲಾ ಎಳೆದು ಹಾಕುತ್ತಾ ಹೂಗಿಡಗಳನ್ನು, ಬಟ್ಟೆ ಒಣಹಾಕುವ ತಂತಿಗಳನ್ನೆಲ್ಲಾ ಎಳೆದು ಹಾಕಿ ಸಿಕ್ಕ ಮರಗಿಡಗಳನ್ನೆಲ್ಲ ನೆಲಕ್ಕುರುಳಿಸಿ ದಾಂಧಲೆ ನಡೆಸುತ್ತಿವೆ. ಕೆಲವು ವಾರಗಳ ಹಿಂದೆ ಕಾಡಾನೆ ಮನೆಯ ಬದಿಯಲ್ಲೇ ಇರುವ ಸಪೋಟ ಮರವನ್ನು ಬುಡಸಮೇತ ನೆಲಕ್ಕುರುಳಿಸಿದೆ. ಇಲ್ಲಿನ ನಿವಾಸಿಯೊಬ್ಬರು ಕಾಡಾನೆಗಳ ಕಾಟ ತಡೆಯಲು ಸಾಲ ಮಾಡಿ ಸೋಲಾರ್ ಬೇಲಿ ಅಳವಡಿಸಿದ್ದಾರೆ. ಆದರೆ ಬುದ್ಧಿವಂತ ಆನೆಗಳು ಮರವನ್ನು ಸೋಲಾರ್ ಬೇಲಿಯ ಮೇಲೆ ಉರುಳಿಸಿ ತೋಟಕ್ಕೆ ಲಗ್ಗೆಯಿಡುತ್ತವೆ. ಮಾನವರಾದ ನಾವು ಒಂದು ಹೊತ್ತು ಆಹಾರವಿಲ್ಲವೆಂದರೆ ಪರಿತಪ್ಪಿಸುತ್ತೇವೆ. ಹಾಗಿರುವಾಗ ದೈತ್ಯ ದೇಹವನ್ನೊಂದಿರುವ ಆನೆಗಳಿಗೆ ಆಹಾರವಿಲ್ಲದಿದ್ದರೆ ಅವು ಏನು ತಾನೇ ಮಾಡಲು ಸಾಧ್ಯ. ಈ ಕಾರಣದಿಂದ ಅವು ನಾಡಿನತ್ತ ಹೆಜ್ಜೆ ಇಡುತ್ತವೆ.
ಆನೆಗಳು ಎಷ್ಟು ಹತ್ತಿರ ಬರುತ್ತವೆಂದರೆ ಮನೆಯ ಕಿಟಕಿಯ ಸಮೀಪದಲ್ಲೇ ಬಂದು ಘೀಳಿಡುತ್ತಾ ದಾಂಧಲೆ ನಡೆಸುತ್ತವೆ. ಮನೆಯವರು ಜೀವ ಭಯದಲ್ಲೇ ಪ್ರತಿದಿನವೂ ರಾತ್ರಿ ಕಳೆಯಬೇಕಾಗಿದೆ. ವಿಪರ್ಯಾಸವೆಂದರೆ ಈ ಕಾಡಾನೆಗಳ ಕಾಟಕ್ಕೆ ಬೇಸತ್ತು ಕೆಲವರು ತಮ್ಮ ತೋಟದಲ್ಲಿ ಒಂದೇ ಒಂದು ಬಾಳೆಗಿಡಗಳನ್ನು ಕೂಡ ಬೆಳೆಸುತ್ತಿಲ್ಲ. ಈ ಭಾಗದಲ್ಲಿ ಇದು ಇಂದು ನಿನ್ನೆಯ ಕತೆಯಲ್ಲ. ಹಲವು ವರ್ಷಗಳಿಂದ ಇದೇ ಸ್ಥಿತಿಯಾಗಿದೆ. ಪ್ರತಿ ದಿನವೂ ಕಾಡಾನೆಗಳು ಲಗ್ಗೆಯಿಡುತ್ತವೆ.
ತುರ್ತು ಸಂದರ್ಭದಲ್ಲಿ ವಾಹನದಲ್ಲಿ ತೆರಳಲೂ ಕೂಡ ಭಯವಾಗುತ್ತದೆ. ಈ ಆನೆಗಳು ಎಷ್ಟು ಸೂಕ್ಷ್ಮತೆಯಿಂದ ಬರುತ್ತವೆಂದರೆ ವಿದ್ಯುತ್ ಬೆಳಕನ್ನು ಆರಿಸಿದ ನಂತರ ಮೆಲ್ಲನೆ ಬಂದು ತಮ್ಮ ಕಾಯಕದಲ್ಲಿ ತೊಡಗುತ್ತವೆ. ಯಾವ ಶಬ್ಧಕ್ಕೂ ಇವು ಹೆದರುವುದಿಲ್ಲ. ಸಂಜೆಯ ಸಮಯದಲ್ಲಿ ಹೊರ ಹೋಗಲು ಆಗುವುದಿಲ್ಲ. ಎಲ್ಲರೂ ಸಂಜೆ ಬೇಗನೆ ಮನೆ ಸೇರುವ ಅನಿವಾರ್ಯತೆಯಿದೆ. ಮೊದಲು ಮನೆಗಳಿಗೆ ಬರುವ ದಾರಿಯಲ್ಲೇ ಇರುವ ಹಲಸಿನ ಮರದ ಹಣ್ಣನ್ನು ತಿನ್ನಲು ಬರುವುದರಿಂದ ಹೊರ ಹೋಗುವಂತೆಯೇ ಇಲ್ಲ. ತಮ್ಮ ಬದುಕಿಗೆ ಕೃಷಿಯನ್ನೇ ನಂಬಿರುವ ಇಲ್ಲಿನ ನಿವಾಸಿಗಳು ಭಯಭೀತ ರಾಗಿದ್ದಾರೆ. ಇತ್ತ ಅರಣ್ಯ ಇಲಾಖೆ ತುರ್ತು ಗಮನ ಹರಿಸಬೇಕಿದೆ.
ಅರಣ್ಯದಲ್ಲಿ ಕೇವಲ ತೇಗ, ನೀಲಗಿರಿ ಮರಗಳೇ ಕಾಣಸಿಗುತ್ತವೆ. ಇದರ ಬದಲು ಆನೆಗಳಿಗೆ ಬೇಕಾದ ಆಹಾರದ ಬೆಳೆಗಳಾದ ಬಾಳೆ, ಕಬ್ಬು, ಜೋಳ ಮುಂತಾದವುಗಳನ್ನು ಬೆಳೆಯಲು ಗುತ್ತಿಗೆ ಆಧಾರದಲ್ಲಿ ಬೇರೆಯವರಿಗೆ ನೀಡಿ. ಅರಣ್ಯ ಇಲಾಖೆಯ ಮೂಲಕ ಪ್ರಾಣಿಗಳಿಗೆ ಆಹಾರ ಒದಗುವಂತೆ ಮಾಡ ಬಹುದಾಗಿದೆ. ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯುಂಟಾದರೆ ಸೋಲಾರ್ ಮೂಲಕ ನೀರು ಹಾಯಿಸಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬೆಳೆದಂತಹ ಬೆಳೆಗಳಿಗೂ ಕೂಡ ನೀರೊದಗಿಸ ಬಹುದಾಗಿದೆ. ಈ ಎಲ್ಲಾ ಕಾರ್ಯಗಳಿಗೆ ಜನತೆಯ ಸಹಾಯ ವನ್ನು ಸಂಘ-ಸಂಸ್ಥೆಗಳ ಮೂಲಕ, ಪರಿಸರ ಪ್ರೇಮಿಗಳ ಮೂಲಕ ಪಡೆಯಬಹುದಾಗಿದೆ. ಈ ಕಾರ್ಯಕ್ಕೆ ನಾವುಗಳು ಕೂಡ ಕೈಜೋಡಿಸುತ್ತೇವೆ ಎಂದು ಇಲ್ಲಿನ ನಿವಾಸಿಗಳು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ಇದು ಹೀಗೆ ಮುಂದುವರೆದರೆ ಯಾವಾಗ ಕಾಡಾನೆಗಳು ಮನೆಯೊಳಗೇ ನುಗ್ಗುತ್ತವೆ? ತಿಳಿಯದು. ಆದುದರಿಂದ ಕೊಡಗಿನಲ್ಲಿ ಕಾಡಾನೆಯ ಸಮಸ್ಯೆಗೆ ಅರಣ್ಯ ಇಲಾಖೆ ಹಾಗೂ ಜನತೆ ಕೈಜೋಡಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.
ವರದಿ: ಗಿರೀಶ್‍ಕಾಂತ್ ಪರಪ್ಪು