ಶ್ರೀಮಂಗಲ, ಜು. 8 : ರಾಜ್ಯ ಸರಕಾರ ಕೋವಿಡ್ ಪ್ಯಾಕೇಜ್‍ನಲ್ಲಿ ಹಣ್ಣು ಹಾಗೂ ಹೂ ಬೆಳೆಗಾರರಿಗೆ ಪರಿಹಾರವನ್ನು ಘೋಷಿಸಿದೆ. ಇದರೊಂದಿಗೆ ಸತತ ಎರಡು ವರ್ಷದಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವ ಜಿಲ್ಲೆಯ ಎಲ್ಲಾ ಬೆಳೆಗಾರರಿಗೂ ಮತ್ತು ಅಸಂಘಟಿತ ವರ್ಗದ ಕಾರ್ಮಿಕರಿಗೂ ಸೂಕ್ತ ಕೋವಿಡ್ ಪ್ಯಾಕೇಜಿನಿಂದ ನೆರವು ನೀಡಬೇಕೆಂದು ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೀದೇರಿರ ನವೀನ್ ಒತ್ತಾಯಿಸಿದ್ದಾರೆ.

ಹುದಿಕೇರಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲಾಕ್‍ಡೌನ್‍ನಿಂದ ಉಂಟಾಗಿರುವ ಸಮಸ್ಯೆಯಿಂದ ಉದ್ಯೋಗ ಕಳೆದುಕೊಂಡಿರುವ ವಿವಿಧ ವ್ಯಾಪಾರ ಮಳಿಗೆಯಲ್ಲಿ ಕೆಲಸ ಮಾಡುತ್ತಿರುವ ಜಿಲ್ಲೆಯ ಕಾರ್ಮಿಕರು ಸಂಕಷ್ಟದಲ್ಲಿದ್ದು, ಅವರಿಗೆ ಸೂಕ್ತ ಪರಿಹಾರ ಪ್ರಕಟಿಸಬೇಕೆಂದು ಒತ್ತಾಯಿಸಿದರು. ರಾಜ್ಯ ಸರಕಾರದ ಕೋವಿಡ್ ಪರಿಹಾರ ಪ್ಯಾಕೇಜಿನಲ್ಲಿ ಪ್ರಕಟಿಸಿದಂತೆ ಟ್ಯಾಕ್ಸಿ ಚಾಲಕರು, ಆಟೋ ರಿಕ್ಷಾ ಚಾಲಕರಲ್ಲಿ ಬಹುತೇಕರಿಗೆ ಪರಿಹಾರ ದೊರೆತಿಲ್ಲ. ಈ ಬಗ್ಗೆ ಸೂಕ್ತ ರೀತಿಯ ಕ್ರಮಕೈಗೊಳ್ಳಲು ಒತ್ತಾಯಿಸಿದರು.

ಕೊಡಗು ಜಿಲ್ಲೆಗೆ ಕೇರಳದ ಬಾವಲಿಯಿಂದ ಹೆಚ್.ಡಿ ಕೋಟೆಯ ಮೂಲಕ ದಕ್ಷಿಣ ಕೊಡಗಿನ ನಿಟ್ಟೂರು-ಕಾರ್ಮಾಡು ಗೇಟ್ ಮೂಲಕ ಯಾವುದೇ ತಪಾಸಣೆಗೆ ಒಳಗಾಗದೇ ಜನರು ಕೊಡಗಿಗೆ ಒಳನುಸುಳುತ್ತಿದ್ದು, ಇವರ ಬಗ್ಗೆ ಕನಿಷ್ಟ ಥರ್ಮಲ್ ಸ್ಕ್ರೀನಿಂಗ್ ಮತ್ತು ಇತರ ಮುನ್ನೆಚ್ಚರಿಕೆ ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅಂತರ್‍ರಾಷ್ಟ್ರೀಯವಾಗಿ ಕಚ್ಚಾತೈಲಾ ದರ ಬಾರಿ ಇಳಿಕೆಯಾಗಿದ್ದರೂ ಅದರ ಲಾಭ ಸಾಮಾನ್ಯ ಜನರಿಗೆ ಸಿಗುತ್ತಿಲ್ಲ. ಕಚ್ಚಾತೈಲ ದರ ಇಳಿಕೆಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗದೇ ದಿನನಿತ್ಯ ಏರಿಕೆಯಾಗುತ್ತಿದೆ. ಇದರಿಂದ ದಿನನಿತ್ಯ ಬಳಕೆಯ ಸಾಮಗ್ರಿಗಳ ಬೆಲೆ ಏರಿಕೆಯಾಗುತ್ತಿದ್ದು, ಕೋವಿಡ್‍ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರ ವಿರುದ್ದ ಮುಂದಿನ ದಿನಗಳಲ್ಲಿ ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ 21 ವಲಯದ ಅಧ್ಯಕ್ಷರು ಹಾಗೂ ಕಾರ್ಯಕರ್ತರನ್ನು ಸಂಘಟಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ನವೀನ್ ಎಚ್ಚರಿಸಿದರು.

ಈ ಸಂದರ್ಭ ಡಿ.ಸಿ.ಸಿ. ಸದಸ್ಯ ಚಕ್ಕೇರ ವಾಸುಕುಟ್ಟಪ್ಪ, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕೆ.ಎಂ. ಬಾಲಕೃಷ್ಣ, ಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ ಹಾಜರಿದ್ದರು.