ವೀರಾಜಪೇಟೆ, ಜು. 6: ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಗಣನೀಯ ಇಳಿಕೆಯಾಗುತ್ತಿದ್ದು, ದೇಶದಲ್ಲಿ ಮಾತ್ರ ಪೆಟ್ರೋಲ್ ಹಾಗೂ ಡೀಸಲ್ ಬೆಲೆ ಗಗನಕ್ಕೇರುತ್ತಿದೆ. ಇದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುವುದಲ್ಲದೆ ಸಂಸದರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಕೂಡಲೇ ತೈಲ ಬೆಲೆಯನ್ನು ಜನರಿಗೆ ಹೊರೆಯಾಗದಂತೆ ಮಾಡಬೇಕೆಂದು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರಂಜಿ ಪೂಣಚ್ಚ ಅವರು, ಇಂದು ತೈಲ ದುಬಾರಿ ಬೆಲೆಯ ಪರಿಸ್ಥಿತಿಯನ್ನು ಹೊಂದಿದೆ. ದುಸ್ತರ ಬದುಕನ್ನು ಸಾಗಿಸುತ್ತಿರುವ ಸಂದರ್ಭದಲ್ಲಿ ತೈಲ ಬೆಲೆ ಏರಿಕೆಯಿಂದ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರುವಂತಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ನರೇಂದ್ರ ಕಾಮತ್ ಮಾತನಾಡಿ, ಲಾಕ್ಡೌನ್ನಿಂದಾಗಿ ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ ಹಾಗೂ ಆದಾಯ ಇಲ್ಲದಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹಸಿದ ಹೊಟ್ಟೆಗೆ ತÀಣಿವಿನ ಪೆಟ್ಟಿಗೆ ಎಂದು ದಾನಿಗಳ ಮೂಲಕ ಸಂಗ್ರಹಿಸಿದ ವಸ್ತುಗಳನ್ನು ಆಡಳಿತರೂಢರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯತಿ ಸದಸ್ಯೆ ಲೀಲಾವತಿ ಮಾತನಾಡಿ, ಸಿದ್ದಾಪುರ ಬಳಿಯ ಹುಂಡಿಯಲ್ಲಿ ಸೀಲ್ಡೌನ್ ಆದ ನಂತರ ಬಡ ಜನರಿಗೆ ಕಾರ್ಮಿಕರಿಗೆ ಅಗತ್ಯ ಪಡಿತರ ಸಿಗುತ್ತಿಲ್ಲ ಎಂದು ದೂರಿದರು.
ಗೋಷ್ಠಿಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ತೊರೇರ ಪೊನ್ನಕ್ಕಿ, ಪಟ್ಟಣ ಪಂಚಾಯಿತಿ ಸದಸ್ಯ ರಾಜೇಶ್, ಬ್ಲಾಕ್ ಕಾಂಗ್ರೆಸ್ ಸದಸ್ಯ ಶಾಹುಲ್ ಹಮೀದ್ ಉಪಸ್ಥಿತರಿದ್ದರು.
ರಾಜೀನಾಮೆಗೆ ಆಗ್ರಹ
ಸೋಮವಾರಪೇಟೆ: ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗಪಡಿಸುವ ಮೂಲಕ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುತ್ತಿರುವ ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸೋಮವಾರಪೇಟೆ ವ್ಯಾಪ್ತಿಯ ಕೆಲ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಸಿಸಿ ಮಾಜಿ ಉಪಾಧ್ಯಕ್ಷ ಕೆ.ಎ. ಆದಂ, ಕಾಂಗ್ರೆಸ್ ಮುಖಂಡ ವಿ.ಪಿ. ಶಶಿಧರ್ ಮತ್ತು ಕಾಂಗ್ರೆಸ್ ಮೇಲಿನ ಅಭಿಮಾನದಿಂದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನೆ ಸಂದರ್ಭ ಶಶಿಧರ್ ಕೆಟ್ಟ ಉದ್ದೇಶದಿಂದ ಪ್ರಧಾನಿಯ ವಿರುದ್ಧ ಮಾತನಾಡಿಲ್ಲ ಎಂದು ಸಮರ್ಥಿಸಿದರು.
ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಅವರು ಮೋದಿಯವರ ಎಲ್ಲಾ ಕೆಲಸಗಳನ್ನು ಒಪ್ಪಿಲ್ಲ. ಈ ಬಗ್ಗೆ ಅವರೇ ಪ್ರತಿಕ್ರಿಯೆ ನೀಡಿದ್ದರೂ ಸಹ ಜಿಲ್ಲಾಧ್ಯಕ್ಷರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ಗೋಷ್ಠಿಯಲ್ಲಿದ್ದ ಎಸ್ಸಿ ಎಸ್ಟಿ ಸಮಿತಿಯ ರಾಜ್ಯ ಸಂಚಾಲಕ ಬಿ.ಈ. ಜಯೇಂದ್ರ ಮಾತನಾಡಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜವಾಬ್ದಾರಿ ಹೊತ್ತಿದ್ದ ಈರ್ವರು ಕಾರ್ಯಕರ್ತರು ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೆ ಪಕ್ಷದಿಂದ ಉಚ್ಛಾಟಿಸಿದ್ದು, ಇದೀಗ ಒಕ್ಕಲಿಗ ಸಮುದಾಯದ ಶಶಿಧರ್ ಹಾಗೂ ಚಂದ್ರಕಲಾ ಅವರನ್ನು ಕಡೆಗಣಿಸುವ ಮೂಲಕ ಜಿಲ್ಲಾಧ್ಯಕ್ಷರು ಮುಂದಿನ ಎಂ.ಎಲ್.ಎ. ಟಿಕೆಟ್ನ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಡಿ.ಕೆ.ಶಿ. ಅಭಿಮಾನಿಗಳ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಪಿ. ದಿನೇಶ್, ಬ್ಲಾಕ್ ಪರಿಶಿಷ್ಟ ವರ್ಗಗಳ ಮಾಜಿ ಅಧ್ಯಕ್ಷ ನಾಗರಾಜ್ ಮಾತನಾಡಿದರು.
ಸರ್ಕಾರ ವಿಫಲ
ಮಡಿಕೇರಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಕೂಡ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಎಂ. ವೆಂಕಪ್ಪಗೌಡ ಆರೋಪಿಸಿದ್ದಾರೆ.
ದೇಶದ ಜನರು ಚಪ್ಪಾಳೆ ತಟ್ಟಿದರು, ಜಾಗಟೆ ಬಾರಿಸಿದರು, ದೀಪ ಉರಿಸಿದರು, ಕೆಲವು ಕಡೆ ಬಿಜೆಪಿ ಕಾರ್ಯಕರ್ತರಂತೂ ಅದೊಂದು ತಮ್ಮ ಪಕ್ಷದ ಕಾರ್ಯಕ್ರಮವೆಂಬಂತೆ ಬಿಂಬಿಸಿದ್ದರು. ಕೊರೊನಾ ವಾರಿಯರ್ಸ್ ಬದಲು ಮೋದಿಯವರಿಗೆ ಜೈಕಾರ ಹಾಕಿದ್ದರು ಎಂದು ಟೀಕಿಸಿದ್ದಾರೆ.
ಪ್ರಪಂಚದಲ್ಲಿ ಭಾರತ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ರಷ್ಯಾ ದೇಶವನ್ನು ಹಿಂದಿಕ್ಕಿ ಮೂರನೇ ಸ್ಥಾನದಲ್ಲಿದೆ, ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಲು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವೇ ಕಾರಣವಾಗಿದೆ ಎಂದು ಆರೋಪಿಸಿದರು.
ಅವ್ಯವಹಾರ ಆರೋಪ
ಮಡಿಕೇರಿ: ಕೇಂದ್ರ ಹಾಗೂ ರಾಜ್ಯ ಸರಕಾರ ಕೊರೊನಾ ಪರೀಕ್ಷೆ ಮತ್ತು ಸುರಕ್ಷತಾ ಉಪಕರಣಗಳ ಖರೀದಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಸಂಶಯವಿದೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಹಾಗೂ ಕೊಡಗು ಜಿಲ್ಲಾ ಕೆಪಿಸಿಸಿ ಸಂಯೋಜಕ ಪ್ರದೀಪ್ ರೈ ಪಾಂಬಾರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಸ್ಕ್ ಹಾಗೂ ಕೋವಿಡ್ ಟೆಸ್ಟ್ ಕಿಟ್ಗೆ ಮಾರುಕಟ್ಟೆ ಬೆಲೆಗಿಂತ ಮೂರು ಪಟ್ಟು ಹೆಚ್ಚಿಗೆ ಬೆಲೆ ನೀಡಿರುವುದು ಮತ್ತು ಸೋಂಕಿತರ ದಿನ ಖರ್ಚು ಐದು ಪಟ್ಟು ಏರಿಕೆಯಾಗಿರುವುದು ಕಂಡು ಬಂದಿದೆ. ಥರ್ಮಲ್ ಸ್ಕೇನರ್, ಆಮ್ಲಜನಕ ಸಿಲಿಂಡರ್, ಗ್ಲೌಸ್, ಪಿಪಿಇ ಕಿಟ್, ವೆಂಟಿಲೇಟರ್ ಈ ಎಲ್ಲಾ ಉಪಕರಣಗಳ ಸಲಕರಣೆಗಳ ಖರೀದಿಯಲ್ಲಿ ದುಪ್ಪಟ್ಟು ಲೆಕ್ಕ ತೋರಿಸಿದೆ ಎಂದು ಆರೋಪಿಸಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಅನಂತಕುಮಾರ್ ಮಾತನಾಡಿ, ಕೊಡಗಿನ ಇಬ್ಬರು ಶಾಸಕರ ಸಾಧನೆ ಶೂನ್ಯ ಎಂದು ಟೀಕಿಸಿದರು.
ಕಳೆದ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಮನೆ ನಿರ್ಮಿಸಿ ಕೊಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರಿ ಆಸ್ಪತ್ರೆಗಳು ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದು, ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ರೈತ, ಕಾರ್ಮಿಕ ವಿರೋಧಿ ನೀತಿಯನ್ನು ನಿಲ್ಲಿಸಬೇಕು, ರೈತರ ಸಾಲ ಮನ್ನಾ ಮಾಡಬೇಕು, ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಅನಂತಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಶಾಲನಗರ ನಗರ ಅಧ್ಯಕ್ಷ ಶರೀಫ್ ಇಬ್ರಾಹಿಂ, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಜನಾರ್ಧನ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ ಹಾಗೂ ಅಸಂಘಟಿತ ಕಾರ್ಮಿಕ ಸಂಘದ ರಾಜ್ಯ ಕಾರ್ಯದರ್ಶಿ ಅಶ್ರಫ್ ಉಪಸ್ಥಿತರಿದ್ದರು.