ಕೂಡಿಗೆ, ಜು. 7: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಕೂಡಿಗೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ರಸ್ತೆಯು ಆನೆಕರೆ ಮಾರ್ಗವಾಗಿ ಹಾರಂಗಿ ರಸ್ತೆಯನ್ನು ಸಂಪರ್ಕಿಸುವ ಹತ್ತಿರದ ಮಾರ್ಗವಾಗಿದೆ. ಈ ಮಾರ್ಗವು ಸಂಪೂರ್ಣ ಗುಂಡಿಬಿದ್ದು, ನೀರು ನಿಂತು ಕೆಸರುಮಯವಾಗಿದೆ. ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಈ ಭಾಗದ ಗ್ರಾಮಸ್ಥರು ರಸ್ತೆಗೆ ಬೃಹತ್ ಮರವನ್ನು ಉರುಳಿಸಿ ಪ್ರತಿಭಟನೆ ಮಾಡಿದ ಘಟನೆ ನಡೆಯಿತು.

ನಾಲ್ಕು ಉಪ ಗ್ರಾಮಗಳಿಗೆ ಹೋಗುವ ಮುಖ್ಯ ರಸ್ತೆ ಇದಾಗಿದೆ; ಗ್ರಾಮ ಪಂಚಾಯಿತಿಯವರು ಈ ಗುಂಡಿಗಳಿಗೆ ಮಣ್ಣು ಸುರಿದ ಪರಿಣಾಮ, ಇದೀಗ ಮಳೆಯ ನೀರು ಸೇರಿ ಕೆಸರು ಮಯವಾಗಿದೆ. ಈ ಭಾಗದ ನೂರಾರು ಕಾರ್ಮಿಕರು, ರೈತರು ಈ ರಸ್ತೆಯನ್ನೇ ಅವಲಂಭಿಸಿದ್ದಾರೆ. ಜನಪ್ರತಿನಿಧಿಗಳಿಗೆ ತಿಳಿಸಿದರೂ ಭರವಸೆಯ ಮಾತುಗಳಾಗಿಯೇ ಉಳಿದಿವೆ ಎಂದು ಸ್ಥಳೀಯ ಗ್ರಾಮಸ್ಥರಾದ ರಾಮು, ಜಯಂತ್, ವೆಂಕಟೇಶ, ಧರ್ಮೇಗೌಡ, ಚಿನ್ನು ರಾಮೇಗೌಡ ಆರೋಪಿಸಿದ್ದಾರೆ.

ಈ ವ್ಯಾಪ್ತಿಯ ಜನಪ್ರತಿನಿಧಿಗಳು ಈ ರಸ್ತೆಯು ನೀರಾವರಿ ಇಲಾಖೆಗೆ ಸೇರಿದ್ದು, ಅವರುಗಳು ಸರಿಪಡಿಸಲಿ ಎಂದು ಹೇಳುತ್ತಿದ್ದಾರೆ ಎಂದು ಪ್ರತಿಭಟನೆ ಮಾಡಿ ರಸ್ತೆಗೆ ದುರಸ್ತಿಗೆ ಆಗ್ರಹಿಸಿದ್ದಾರೆ.

ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ ಭೇಟಿ ನೀಡಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಮುಂದಿನ ದಿನಗಳಲ್ಲಿ ದುರಸ್ತಿಯಾಗಲಿದೆ. ಈಗಾಗಲೇ ಜಿಲ್ಲಾ ಪಂಚಾಯಿತಿ ಇಂಜಿನಿಯರ್, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿರುತ್ತಾರೆ. ಎರಡು ದಿನಗಳಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ಈ ವ್ಯಾಪ್ತಿಯ ಗ್ರಾಮಸ್ಥರು ಭಾಗವಹಿಸಿದ್ದರು.