ಮಡಿಕೇರಿ, ಜು. 8: ಕೋವಿಡ್ 19 ವ್ಯಾಪಕವಾಗಿ ಹರಡುತ್ತಿದ್ದು, ಜಿಲ್ಲೆಯಲ್ಲಿಯೂ ಕೋವಿಡ್ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆದರಿಂದ ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಮತ್ತೆ ಲಾಕ್‍ಡೌನ್ ಅನಿವಾರ್ಯ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟ ಅಭಿಪ್ರಾಯ ಪಟ್ಟಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ ಸುಕುಮಾರ್, ಆರಂಭದ ದಿನದಲ್ಲಿ ಕೊರೊನಾ ನಿಯಂತ್ರಣ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿದೆ. ಆದರೆ ಇದೀಗ ಕೊರೊನಾ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಮಾತ್ರವಲ್ಲದೇ ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುವ ಆತಂಕವೂ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಕೊಡಗಿನ ಜನತೆಯ ಹಿತ ದೃಷ್ಟಿಯಿಂದ ಜಿಲ್ಲಾಡಳಿತ ಶೀಘ್ರದಲ್ಲೇ ಮತ್ತೊಮ್ಮೆ ಲಾಕ್‍ಡೌನ್ ಮಾಡಬೇಕಿದೆ ಎಂದು ಯುವ ಒಕ್ಕೂಟ ಆಗ್ರಹಿಸಿದೆ.

ಆರಂಭದಿಂದಲೂ ಹೊರ ಜಿಲ್ಲೆ, ಹೊರ ರಾಜ್ಯದಿಂದ ಬಂದವರಿಗೆ ಹೆಚ್ಚು ಸೋಂಕು ಕಾಣಿಸಿಕೊಂಡಿದ್ದು, ಇದೀಗ ಇದು ಸಮುದಾಯವನ್ನು ವ್ಯಾಪಿಸಿದೆ. ಸಮುದಾಯಕ್ಕೆ ಹರಡಿರುವ ಸೋಂಕನ್ನು ತಡೆಯಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಉತ್ತಮ ವ್ಯವಸ್ಥೆ ಮಾಡಿದರೂ, ಜಿಲ್ಲಾ ಆಡಳಿತ ನಿಯಮಗಳನ್ನು ಜನ ಸಾಮಾನ್ಯರು ಗಾಳಿಗೆ ತೂರುತ್ತಾರೆ. ಆದ್ದರಿಂದ ಜಿಲ್ಲಾಡಳಿತ ಶೀಘ್ರದಲ್ಲೇ ಮತ್ತೊಮ್ಮೆ ಅಂತರ್‍ರಾಜ್ಯ ಹಾಗೂ ಅಂತರ್‍ಜಿಲ್ಲಾ ಗಡಿಗಳನ್ನು ಮುಚ್ಚಬೇಕು. ಅಂತರ್ ರಾಜ್ಯ, ಜಿಲ್ಲೆ ಸಾರಿಗೆ ವ್ಯವಸ್ಥೆ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.