ಗೋಣಿಕೊಪ್ಪಲು, ಜು. 7: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದು ಇದೀಗ ವಾಣಿಜ್ಯ ನಗರ ಗೋಣಿಕೊಪ್ಪಲುವಿನ ನೇತಾಜಿ ಬಡಾವಣೆಯ ಓರ್ವ ವ್ಯಕ್ತಿ ಹಾಗೂ ಹರಿಶ್ಚಂದ್ರಪುರದ ಓರ್ವ ಮಹಿಳೆಗೆ ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿರುವುದರಿಂದ ಈ ಎರಡು ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳಾಗಿ ಪರಿವರ್ತಿಸಲಾಗಿದೆ.
ಜೂನ್ 29 ರಂದು ಗೋಣಿಕೊಪ್ಪಲುವಿನ ಕೆ.ಇ.ಬಿ. ಹಿಂಭಾಗದ 1ನೇ ಅಡ್ಡ ರಸ್ತೆಯ 34 ಮನೆಗಳನ್ನು ಕಂಟೈನ್‍ಮೆಂಟ್ ವಲಯ ಆಗಿ ಪರಿವರ್ತಿಸಲಾಗಿತ್ತು. ಇದೀಗ ಇದರ ಸಾಲಿಗೆ ನೇತಾಜಿ ಬಡಾವಣೆ ಹಾಗೂ ಹರಿಶ್ಚಂದ್ರಪುರ ಸೇರಿ ಕೊಂಡಿವೆ. ಗೋಣಿಕೊಪ್ಪ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಕಂಟೈನ್‍ಮೆಂಟ್ ವಲಯಗಳಾಗಿವೆ. ಮಂಗಳವಾರ ಮುಂಜಾನೆ ನೇತಾಜಿ ಬಡಾವಣೆಯ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿರುವ ಬಗ್ಗೆ ಜಿಲ್ಲಾಡಳಿತದ ಪ್ರಕಟಣೆ ಹೊರ ಬೀಳುತ್ತಿದ್ದಂತೆಯೇ ನಾಗರಿಕರು ಕೆಲ ಕಾಲ ಆತಂಕಕ್ಕೊಳಗಾಗಿದ್ದರು.
ಸಮಯ ಕಳೆಯುತ್ತಿದ್ದಂತೆ ನಾಗರಿಕರು ಸಹಜ ಸ್ಥಿತಿಗೆ ಮರಳಿದ್ದರು. ಮುಂಜಾನೆಯೇ ಸ್ಥಳಕ್ಕೆ ಪಿಡಿಒ ಶ್ರೀನಿವಾಸ್, ಕಂದಾಯ ಅಧಿಕಾರಿ ರಾಧಾಕೃಷ್ಣ, ಗ್ರಾಮ ಲೆಕ್ಕಿಗ ಮಂಜುನಾಥ್ ತೆರಳಿ ಪರಿಶೀಲನೆ ನಡೆಸಿದರು. ಮನೆಯಲ್ಲಿರುವ ಜನತೆಗೆ ಗಾಬರಿಗೊಳ್ಳದಂತೆ ಸಲಹೆ ನೀಡಿದ ರಲ್ಲದೆ, ತಾಲೂಕು ದಂಡಾಧಿಕಾರಿಗಳಿಗೆ ಇಲ್ಲಿಯ ಮಾಹಿತಿಗಳನ್ನು ರವಾನಿಸಿದರು. ಸ್ಥಳಕ್ಕೆ ಆಗಮಿಸಿದ ತಾಲೂಕಿನ ತಹಶೀಲ್ದಾರ್ ನಂದೀಶ್ ಕುಮಾರ್, ಇಲ್ಲಿಯ ಮಾಹಿತಿಗಳನ್ನು ಅಧಿಕಾರಿಗಳಿಂದ ಪಡೆದರು.
ನಂತರ ಹರಿಶ್ಚಂದ್ರಪುರಕ್ಕೆ ತೆರಳಿದ ತಹಶೀಲ್ದಾರ್ ನಂದೀಶ್ ಕುಮಾರ್, ಕಂಟೈನ್‍ಮೆಂಟ್ ವಲಯ ಆಸುಪಾಸಿ ನಲ್ಲಿ ತೆರೆದಿದ್ದ ಅಂಗಡಿ ಮಳಿಗೆಗಳನ್ನು ಮುಚ್ಚುವಂತೆ ಸೂಚನೆ ನೀಡಿದರು. ಆಯಾಕಟ್ಟಿನ ಪ್ರದೇಶದಿಂದ ಯಾರು ಹೊರ ಬರದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು. ಕಂಟೈನ್‍ಮೆಂಟ್ ವಲಯದ ಮೂರು ರಸ್ತೆಗಳನ್ನು ಬಂದ್ ಮಾಡಿಸಿ ಯಾರೂ ಹೊರ ಬಾರದಂತೆ ಎಚ್ಚರಿಕೆ ನೀಡಿದರು.
ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ, ಗ್ರಾಮ ಲೆಕ್ಕಿಗ ಮಂಜುನಾಥ್, ಗ್ರಾಮ ಸಹಾಯಕ ಸುನೀಲ್, ಸಿಬ್ಬಂದಿಗಳಾದ ನವೀನ್, ರಾಜು, ಆಶಾ ಕಾರ್ಯಕರ್ತೆ, ಆರೋಗ್ಯ ಸಹಾಯಕರು, ಗ್ರಾಮ ಪಂಚಾಯಿತಿ ಸದಸ್ಯರಾದ ಕುಲ್ಲಚಂಡ ಪ್ರಮೋದ್ ಗಣಪತಿ ಹಾಜರಿದ್ದರು.