ವೀರಾಜಪೇಟೆ, ಜು. 7: ಕೊಡಗು ಕೇರಳ ಗಡಿ ಪ್ರದೇಶವಾದ ಪೆರುಂಬಾಡಿ ಗ್ರಾಮದಲ್ಲಿ ಒಂದೇ ಕುಟುಂಬದ ಮೂರು ಮಂದಿಗೆ ಆರೋಗ್ಯ ತಪಾಸಣೆಯಲ್ಲಿ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಆರ್ಜಿ ಗ್ರಾಮದ ಬಳಿಯ ಪೆರುಂಬಾಡಿಯ ಇಂದಿರಾನಗರದ ಒಂದು ಭಾಗದ ಆರು ಕುಟುಂಬಗಳ 22 ಮಂದಿ ವಾಸಿಸುವ ಪ್ರದೇಶವನ್ನು ಇಂದು ಭಾರೀ ಮಳೆಯ ನಡುವೆಯೂ ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್, ಇತರ ಆರೋಗ್ಯ ತಂಡ ಸೀಲ್‍ಡೌನ್ ಮಾಡಿ ಸಂಪರ್ಕ ತಡೆಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ವ್ಯಾಪಾರ ಮಾಡುತ್ತಿದ್ದ ಪತಿ, ಪತ್ನಿ, ಎರಡು ಮಕ್ಕಳ ಕುಟುಂಬ ಹತ್ತು ದಿನಗಳ ಹಿಂದೆ ಬೆಂಗಳೂರಿನಿಂದ ತವರಿಗೆ ಬಂದಿದ್ದು, ಮನೆಯಲ್ಲಿಯೇ ಸ್ವಯಂ ಪ್ರೇರಣೆಯಿಂದ ಹೋಮ್ ಕ್ವಾರಂಟೈನ್‍ನಲ್ಲಿದ್ದರು. ಮೊನ್ನೆ ದಿನ ಇವರುಗಳ ಮೂಗಿನ ಹಾಗೂ ಗಂಟಲಿನ ದ್ರವವನ್ನು ಮಡಿಕೇರಿಗೆ ತಪಾಸಣೆಗೆ ಕಳುಹಿಸಲಾಗಿತ್ತು. ಇಂದು ಬೆಳಿಗ್ಗೆ ಮೂರು ಮಂದಿಯ ವರದಿ ಪಾಸಿಟಿವ್ ಬಂದಿದ್ದು, ಆರು ವರ್ಷದ ಮಗುವಿಗೆ ನೆಗೆಟಿವ್ ವರದಿ ಬಂದಿದೆ. ತಾಲೂಕು ಆಡಳಿತಕ್ಕೆ ಮಾಹಿತಿ ದೊರೆತ ತಕ್ಷಣ ಮೂರು ಮಂದಿಯನ್ನು ಅವರ ಮನೆಯಲ್ಲಿಯೇ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಮಡಿಕೇರಿ ಕೋವಿಡ್ ಆಸ್ಪತ್ರೆಯ ವೈದ್ಯರುಗಳು ಮನೆಗೆ ಬಂದು ಈ ಮೂವರಿಗೂ ಚಿಕಿತ್ಸೆ ಮಾಡುತ್ತಿರುವುದಾಗಿ ನಂದೀಶ್ ತಿಳಿಸಿದ್ದಾರೆ.

ಸೀಲ್‍ಡೌನ್ ಮಾಡುವ ಸಂದರ್ಭದಲ್ಲಿ ರೆವಿನ್ಯೂ ಇನ್ಸ್‍ಪೆಕ್ಟರ್ ಪಳಂಗಪ್ಪ, ಆರ್ಜಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ, ಆಶಾ ಕಾರ್ಯಕರ್ತೆಯರು, ಪೊಲೀಸರು ಹಾಜರಿದ್ದರು.

ನಾಲ್ವರಿಗೆ ಹೋಮ್ ಕ್ವಾರಂಟೈನ್

ದುಬೈನಿಂದ ವೀರಾಜಪೇಟೆಗೆ ಬಂದ ನಾಲ್ಕು ಮಂದಿಯನ್ನು ಗುಂಡಿಕೆರೆ, ಚಾಮಿಯಾಲ್ ಹಾಗೂ ವಿ. ಬಾಡಗದಲ್ಲಿ ಹೋಮ್ ಕ್ವಾರಂಟೈನ್ ಮಾಡಲಾಗಿದ್ದು. ಈ ನಾಲ್ಕು ಮಂದಿ ದುಬೈನಿಂದ ಮಂಗಳೂರಿಗೆ ಬಂದು ಅಲ್ಲಿ 7 ದಿನಗಳ ತನಕ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದು, ನಂತರ ತವರು ಗ್ರಾಮಕ್ಕೆ ಬಂದವರು ನಿಗದಿತ ಸಮಯದಲ್ಲಿ ಇವರುಗಳ ಗಂಟಲು ದ್ರವವನ್ನು ತಪಾಸಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆಡಳಿತ ತಿಳಿಸಿದೆ.