ಗಡಿಯಿಂದ ಹಿಂದೆ ಸರಿದ ಸೇನಾಪಡೆ

ನವದೆಹಲಿ, ಜು. 8: ಗಲ್ವಾನ್ ಸಂಘರ್ಷದ ಬಳಿಕ ಗಡಿಯಲ್ಲಿ ಪರಸ್ಪರ ಮುಖಾಮುಖಿಯಾಗಿದ್ದ ಭಾರತ ಮತ್ತು ಚೀನಾ ಸೇನೆ ಇದೀಗ ವಿವಾದಿತ ಪ್ರದೇಶದಿಂದ ಸಂಪೂರ್ಣವಾಗಿ ಸೈನಿಕರನ್ನು ಹಿಂದಕ್ಕೆ ಪಡೆದುಕೊಂಡಿವೆ. ಕಳೆದ 2 ದಿನಗಳಿಂದ ನಡೆದಿದ್ದ ಸೇನೆ ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯ ಇಂದು ಪೂರ್ಣಗೊಂಡಿದ್ದು ವಿವಾದಿತ ಗಲ್ವಾನ್ ಕಣಿವೆಯಿಂದ ಚೀನಾ ಸೇನೆ ತನ್ನ ಯೋಧರನ್ನು 2 ಕಿ.ಮೀ. ಹಿಂದಕ್ಕೆ ಕರೆಯಿಸಿಕೊಂಡಿದೆ. ಈ ಬಗ್ಗೆ ಭಾರತೀಯ ಸೇನಾ ಮೂಲಗಳು ಮಾಹಿತಿ ನೀಡಿದ್ದು, ಗಲ್ವಾನ್ ಕಣಿವೆಯಲ್ಲಿ ಮೊಕ್ಕಾಂ ಹೂಡಿದ್ದ ಚೀನಾ ಸೇನೆ ಇದೀಗ ವಿವಾದಿತ ಪ್ರದೇಶದಿಂದ ಸುಮಾರು 2 ಕಿ.ಮೀ. ನಷ್ಚು ಹಿಂದಕ್ಕೆ ಹೋಗಿದೆ. ಸೇನೆ ಹಿಂದಕ್ಕೆ ಕರೆಯಿಸಿಕೊಳ್ಳುವ ಕಾರ್ಯಕ್ಕೆ ಕಳೆದ 2 ದಿನಗಳ ಹಿಂದೆಯೇ ಚೀನಾ ಸೇನೆ ಚಾಲನೆ ನೀಡಿತ್ತು. ಇಂದು ಆ ಕಾರ್ಯ ಪೂರ್ಣಗೊಂಡಿದೆ. ವಿವಾದಿತ ಸ್ಥಳದಲ್ಲಿ ಚೀನಾ ಸೈನಿಕರು ನಿರ್ಮಿಸಿದ್ದ ಸಂಪೂರ್ಣ ಟೆಂಟ್‍ಗಳನ್ನು ತೆರವುಗೊಳಿಸಿದ್ದು ಮಾತ್ರವಲ್ಲದೇ ಎಲ್ಲ ಸೈನಿಕರೂ ಪ್ಯಾಟ್ರಲಿಂಗ್ ಪಾಯಿಂಟ್ 2 ಕಿ.ಮೀ. ಹಿಂದಕ್ಕೆ ಹೋಗಿದ್ದಾರೆ. ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಪ್ರದೇಶಗಳಿಂದ ಉಭಯ ಸೈನಿಕರೂ ಸಂಪೂರ್ಣವಾಗಿ ತಮ್ಮ ತಮ್ಮ ಟೆಂಟ್‍ಗಳನ್ನು ಖಾಲಿ ಮಾಡಿ ಹಿಂದಕ್ಕೆ ಸರಿದಿದ್ದಾರೆ.

ಖಾಸಗಿ ಶಾಲಾ ಶಿಕ್ಷಕರಿಗೆ ವೇತನ

ಬೆಂಗಳೂರು, ಜು. 8: ಕರ್ನಾಟಕ ಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಮನವಿಗೆ ಸ್ಪಂದಿಸಿದ ಸರ್ಕಾರಿ ಶಾಲೆಗಳ ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ತಮ್ಮ ಸಹವರ್ತಿಗಳಿಗೆ ಒಂದು ದಿನದ ವೇತನ ನೀಡಲು ಸಮ್ಮತಿಸಿದ್ದಾರೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ಏಪ್ರಿಲ್‍ನಿಂದ ಅವರಿಗೆ ವೇತನ ನೀಡಲಾಗಿಲ್ಲ. ಸರ್ಕಾರಿ ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ದುಡಿಯುವ ತಮ್ಮ ಸಹವರ್ತಿಗಳಿಗೆ ಒಂದು ದಿನದ ವೇತನವನ್ನು ನೀಡಲು ಒಪ್ಪಿಕೊಂಡಿದ್ದಾರೆ, ಏಕೆಂದರೆ ಅವರ ವ್ಯವಸ್ಥಾಪಕರು ಪಾವತಿಸದ ಕಾರಣ ಅವರು ಸಂಕಷ್ಟದಲ್ಲಿದ್ದಾರೆ, ಲಾಕ್‍ಡೌನ್‍ನಿಂದಾಗಿ ಹಣವನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ಹೆಚ್.ಕೆ. ಮಂಜುನಾಥ್ ಹೇಳಿದ್ದಾರೆ. ಕೊರೊನಾ ವೈರಸ್ ಲಾಕ್‍ಡೌನ್ ಜಾರಿಗೊಳಿಸಿದ್ದ ಕಾರಣ ಮಾರ್ಚ್ 25 ರಿಂದ ರಾಜ್ಯಾದ್ಯಂತ ನೂರಾರು ಶಾಲೆಗಳು ಮುಚ್ಚಲ್ಪಟ್ಟಿದ್ದರಿಂದ, ಖಾಸಗಿ ಮತ್ತು ಅನುದಾನರಹಿತ ಸಂಸ್ಥೆಗಳ ಆಡಳಿತಕ್ಕೆ ವಿದ್ಯಾರ್ಥಿಗಳಿಂದ ಶುಲ್ಕವನ್ನು ಸಂಗ್ರಹಿಸಲು ಅಥವಾ ತಮ್ಮ ಅಧ್ಯಾಪಕರಿಗೆ ಮಾಸಿಕ ಸಂಬಳ ನೀಡಲು ಹಣವನ್ನು ಹೊಂದಿಸಲು ಸಾಧ್ಯವಾಗಿರಲಿಲ್ಲ. ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಶಾಲೆಗಳು ಇನ್ನೂ ಬೇಸಿಗೆಯ ನಂತರ ತರಗತಿಗಳನ್ನು ಪುನರಾರಂಭಿಸಲಿಲ್ಲ ಆ ಶಾಲೆಗಳೂ ಇದುವರೆಗೆ ಶುಲ್ಕವನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ, ಇದರ ಪರಿಣಾಮವಾಗಿ ಏಪ್ರಿಲ್‍ನಿಂದ ಶಿಕ್ಷಕರ ವೇತನವನ್ನು ಪಾವತಿಸಲಾಗಿಲ್ಲ ಎಂದು ಮಂಜುನಾಥ್ ತಿಳಿಸಿದ್ದಾರೆ.

ಚೀನಾದಲ್ಲಿ ಕೊರೊನಾ ಮೂಲ ಶೋಧನೆ

ನ್ಯೂಯಾರ್ಕ್, ಜು. 8: ಕೋವಿಡ್-19 ವೈರಾಣುವಿನ ಮೂಲ ಶೋಧನೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ತಂಡವನ್ನು ಚೀನಾಗೆ ಕರೆಸಲಾಗುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಹೇಳಿದ್ದಾರೆ. ಡಬ್ಲ್ಯುಹೆಚ್‍ಒ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಕಳೆದ ವಾರ ತಿಳಿಸಿದಂತೆ ವೈರಸ್‍ನ ಉಗಮದ ಬಗ್ಗೆ ಸಮಗ್ರ ತನಿಖೆ ಮಾಡಬೇಕಾಗಿದೆ. ಈ ಭೇಟಿಗೆ ಡಬ್ಲ್ಯುಹೆಚ್‍ಒ ಚೀನಾ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿತ್ತು. ಇದೀಗ ಮಾತುಕತೆ ಫಲ ನೀಡಿದ್ದು ಚೀನಾ ಸರ್ಕಾರ ಡಬ್ಲ್ಯುಹೆಚ್‍ಒ ತಂಡವನ್ನು ಚೀನಾಗೆ ಆಗಮಿಸಲು ಅನುಮತಿಸಿದೆ. ವೈರಸ್ ಮೂಲದ ಬಗ್ಗೆ ತನಿಖೆ ನಡೆಸಲು ತಂಡ ಮುಂದಿನ ವಾರ ಚೀನಾಕ್ಕೆ ಹೋಗಲಿದೆ ಎಂದು ಸ್ವಾಮಿನಾಥನ್ ಎಎನ್‍ಐಗೆ ತಿಳಿಸಿದ್ದಾರೆ.

3 ಟ್ರಸ್ಟ್‍ಗಳ ವಿರುದ್ಧ ತನಿಖೆಗೆ ಸಮಿತಿ

ನವದೆಹಲಿ, ಜು. 8: ಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಮೂರು ಟ್ರಸ್ಟ್‍ಗಳ ವಿರುದ್ಧದ ತನಿಖೆಗೆ ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡಿದೆ ಎಂದು ತಿಳಿದುಬಂದಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಮೂರು ಟ್ರಸ್ಟ್‍ಗಳ ವಿರುದ್ಧ ಕೇಳಿಬಂದಿರುವ ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಈ ಸಂಬಂಧ ತನಿಖೆಗೆ ಸಮಿತಿ ರಚನೆ ಮಾಡಿದೆ. ಮೂಲಗಳ ಪ್ರಕಾರ ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಹಾಗೂ ಇಂದಿರಾ ಗಾಂಧಿ ಮೆಮೋರಿಯಲ್ ಟ್ರಸ್ಟ್‍ಗಳ ವಿರುದ್ಧ ಆದಾಯ ತೆರಿಗೆ ವಂಚನೆ ಹಾಗೂ ವಿದೇಶಿ ದೇಣಿಗೆ ನಿಯಮಗಳ ಉಲ್ಲಂಘನೆಯಂತಹ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯವು ಅಂತರ್-ಸಚಿವಾಲಯ ಸಮಿತಿಯನ್ನು ರಚಿಸಿದೆ. ಈ ಬಗ್ಗೆ ಗೃಹ ಸಚಿವಾಲಯದ ವಕ್ತಾರರು ಟ್ವೀಟ್ ಮಾಡಿದ್ದು, ಗಾಂಧಿ ಕುಟುಂಬ ನಡೆಸುವ ಟ್ರಸ್ಟ್‍ಗಳಿಂದ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ), ಆದಾಯ ತೆರಿಗೆ ಕಾಯ್ದೆ ಮತ್ತು ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಗಳಂತಹ ಕಾನೂನುಗಳ ಉಲ್ಲಂಘನೆಗಳ ಬಗ್ಗೆ ತನಿಖೆ ಕೇಂದ್ರೀಕರಿಸಲಿದೆ. ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರು ಸಮಿತಿಯ ನೇತೃತ್ವ ವಹಿಸಲಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಅಂಬೇಡ್ಕರ್ ನಿವಾಸದ ಮೇಲೆ ದಾಳಿ

ಮುಂಬೈ, ಜು. 8: ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಮುಂಬೈ ನಿವಾಸದ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದು, ಈ ಸಂಬಂಧ ದುಷ್ಕರ್ಮಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಮುಂಬೈನ ದಾದರ್‍ನಲ್ಲಿರುವ ದಿ. ಡಾ. ಬಿ.ಆರ್. ಅಂಬೇಡ್ಕರ್ ಅವರ ಐತಿಹಾಸಿಕ “ರಾಜ್ ಗೃಹ” ನಿವಾಸಕ್ಕೆ ನುಗ್ಗಿರುವ ದುಷ್ಕರ್ಮಿಗಳು ಹಲವು ವಸ್ತುಗಳನ್ನು ನಾಶಗೊಳಿಸಿದ್ದಾರೆ. ಮೂಲಗಳ ಪ್ರಕಾರ ಮಂಗಳವಾರ ಸಂಜೆ ಅಂಬೇಡ್ಕರ್ ಅವರ ರಾಜ್ ಗೃಹ ನಿವಾಸಕ್ಕೆ ಕನಿಷ್ಟ ಇಬ್ಬರು ಅಪರಿಚಿತ ವ್ಯಕ್ತಿಗಳು ಒಳನುಗ್ಗಿದ್ದರು. ಅಷ್ಟೇ ಅಲ್ಲ ಸಿಸಿಟಿವಿ ಕ್ಯಾಮರಾ, ಗ್ಲಾಸ್ ಪ್ಯಾನ್ಸ್, ಹೂ ಕುಂಡಗಳನ್ನು ಒಡೆದು ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಡಾ. ಅಂಬೇಡ್ಕರ್ ಅವರ ಮೊಮ್ಮಗ ಸುಜತ್ ಅವರು ಹೇಳಿರುವಂತೆ ಅಂಬೇಡ್ಕರ್ ಕುಟುಂಬಸ್ಥರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಿಡಿಗೇಡಿಗಳು ಎರಡು ಕೊಠಡಿಗಳತ್ತ ಕಲ್ಲು ತೂರಿದ್ದಾರೆ. ಒಂದು ಕೊಠಡಿ ಮ್ಯೂಸಿಯಂ ಹಾಗೂ ಫೋಟೋ ಗ್ಯಾಲರಿ ಹಾಗೂ ಬಾಬಾಸಾಹೇಬ್ ಅವರ ಪುಸ್ತಕಗಳ ಕೊಠಡಿಯಾಗಿದ್ದರೆ ಇನ್ನೊಂದು ಅವರ ಕಚೇರಿ/ಸಭಾ ಕೊಠಡಿಯಾಗಿದೆ ಎಂದು ವಂಚಿತ್ ಬಹುಜನ್ ಅಘಾಡಿ ಅಧ್ಯಕ್ಷ, ಹಾಗೂ ಅಂಬೇಡ್ಕರ್ ಅವರ ಪುತ್ರ ಪ್ರಕಾಶ್ ಅಂಬೇಡ್ಕರ್ ಅವರ ಮಗನಾಗಿರುವ ಸುಜತ್ ತಿಳಿಸಿದ್ದಾರೆ.

ಟ್ರಕ್ ಹರಿದು ಐವರ ಸಾವು

ಲಕ್ನೋ, ಜು. 8: ಪಾದಚಾರಿ ರಸ್ತೆ ಮೇಲೆ ಮಲಗಿದ್ದವರ ಮೇಲೆ ಟ್ರಕ್ ಹರಿದ ಪರಿಣಾಮ ಐವರು ಕೂಲಿ ಕಾರ್ಮಿಕರು ಧಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಸಿಕಂದ್ರಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮುಂಜಾನೆ ಸುಮಾರು 2 ಗಂಟೆಗೆ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತರ ಆರೋಪಿ ಟ್ರಕ್ ಚಾಲಕ ಮತ್ತು ಕ್ಲೀನರ್ ಪರಾರಿಯಾಗಲು ಪ್ರಯತ್ನಿಸಿದ್ದರು. ಆದರೆ ಸ್ಥಳೀಯ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಆರೋಪಿಗಳನ್ನು ಮುನೇಶ್ ಮತ್ತು ಸಿಂಟು ಎಂದು ಗುರುತಿಸಲಾಗಿದೆ.

ರಾಜ್ಯದ ವಿವಿಧೆಡೆ ಭಾರೀ ಮಳೆ

ಉಡುಪಿ, ಜು. 8: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನರ ಜೀವನ ಅಸ್ತವ್ಯಸ್ತವಾಗಿತ್ತದೆ. ಇತ್ತ ಮಳೆಯಿಂದ ಅನೇಕ ನದಿಗಳು ತುಂಬಿ ಹರಿಯುತ್ತಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಅಬ್ಬರದ ಮಳೆ ಸುರಿಯುತ್ತಿದೆ. ಕರಾವಳಿ ಭಾಗದ ಅಂಕೋಲ ಭಾಗದಲ್ಲಿ ಅಬ್ಬರದ ಮಳೆಗೆ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ತಗ್ಗು ಪ್ರದೇಶ ಶಿರೂರು ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಅಬ್ಬರಕ್ಕೆ ಆವರ್ಸಾದ ಬಳಿ ವಿದ್ಯುತ್ ಕಂಬ ಉರುಳಿ ಎರಡು ಹಸುಗಳು ಸಾವು ಕಂಡಿವೆ. ಕರಾವಳಿ ಉದ್ದಕ್ಕೂ ಮಳೆ ಪ್ರಮಾಣ ಹೆಚ್ಚಾಗಿದ್ದು, ಸಮುದ್ರದ ಅಲೆಯ ಪ್ರಮಾಣ ಸಹ ಏರಿಕೆಯಾಗಿದೆ. ಹೀಗಾಗಿ ಮೀನುಗಾರಿಕೆ ಸಹ ಬಂದ್ ಮಾಡಲಾಗಿದೆ. ಇನ್ನೂ ನಾಲ್ಕು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.