ಮಡಿಕೇರಿ, ಜು. 7: ಕೊಡಗು ಜಿಲ್ಲೆಯಲ್ಲಿ ಪಕ್ಷದ ಪ್ರಮುಖರು ಗುಂಪುಗಾರಿಕೆಯೊಂದಿಗೆ; ಪರಸ್ಪರ ಟೀಕಿಸುತ್ತಾ ಹೇಳಿಕೆಗಳಲ್ಲಿ ತೊಡಗಿರುವ ಬಗ್ಗೆ ಕೆಪಿಸಿಸಿ ವರಿಷ್ಠರು ಗಮನ ಹರಿಸಿದ್ದು, ಇಂತಹ ಹೇಳಿಕೆಗಳಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸದಂತೆ ಮೌಖಿಕ ಆದೇಶ ನೀಡಿರುವುದಾಗಿ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಪಕ್ಷದ ಪ್ರಮುಖರೊಳಗಿನ ಗುಂಪುಗಾರಿಕೆ ಬಗ್ಗೆ ವರಿಷ್ಠರ ಗಮನಕ್ಕೆ ತರಲಾಗಿದ್ದು, ತಕ್ಷಣದಿಂದಲೇ ಪರಸ್ಪರ ಟೀಕಿಸುತ್ತಾ, ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸುವಂತೆ ತಿಳಿಹೇಳಲಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ.ಪ್ರಸಕ್ತ ಸನ್ನಿವೇಶದಲ್ಲಿ ಪಕ್ಷದಿಂದ ಜನತೆಯ ಸಮಸ್ಯೆಗಳ ಬಗ್ಗೆ ಒಗ್ಗೂಡಿ ಕಾರ್ಯನಿರ್ವ ಹಿಸುವುದರೊಂದಿಗೆ, ಎಲ್ಲರೂ ಕಾಂಗ್ರೆಸ್ಸಿನ ಬೆಳವಣಿಗೆಗೆ ಶ್ರಮಿಸುವಂತೆ ವರಿಷ್ಠರು ಸಲಹೆ ನೀಡಿದ್ದು, ಆ ದಿಕ್ಕಿನಲ್ಲಿ ಪ್ರತಿಯೊಬ್ಬರು ಕಾಳಜಿ ತೋರ ಬೇಕೆಂದು ವೀಣಾ ಅಚ್ಚಯ್ಯ ನೆನಪಿಸಿದ್ದಾರೆ.

ಈ ಹಿಂದೆ ಜಿಲ್ಲೆಯಲ್ಲಿ ತಾನು ಸೇರಿದಂತೆ ಅನೇಕ ಹಿರಿಯರು ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದು, ಈಗಿನ ಪದಾಧಿಕಾರಿಗಳು ಕೂಡ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಮೂಲಕ ಸಂಘಟನೆ ಬಲಪಡಿಸುವುದು ಜವಾಬ್ದಾರಿಯಾಗಿದೆ ಎಂದು ಅವರು ತಿಳಿ ಹೇಳಿದ್ದಾರೆ. ಅಲ್ಲದೆ ಯಾರೂ ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ನೀಡದಂತೆ ಮತ್ತು ಗುಂಪುಗಾರಿಕೆಗೆ ಅವಕಾಶ ಮಾಡಿಕೊಡದಂತೆ ಅವರು ಸಲಹೆ ನೀಡಿದ್ದಾರೆ.

(ಮೊದಲ ಪುಟದಿಂದ)

ಜಿಲ್ಲಾಧ್ಯಕ್ಷರ ಹೇಳಿಕೆ

ಇತ್ತೀಚೆಗೆ ಕೆಲವು ಕಾಂಗ್ರೆಸ್ಸಿಗರು ಪಕ್ಷದಲ್ಲಿದ್ದುಕೊಂಡೇ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಇನ್ನು ಮುಂದೆ ಯಾರೂ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಬಾರದೆಂದು ಸೂಚನೆ ನೀಡಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತಿಳಿಸಿದ್ದಾರೆ. ಪಕ್ಷದ ಏಳಿಗೆಗಾಗಿ ಶ್ರಮಿಸುವ ಮೂಲಕ ಸಂಘಟಿತ ನಾಯಕತ್ವಕ್ಕೆ ಒತ್ತು ನೀಡಿ ಎಂದು ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಅವರ ಸೂಚನೆಗಳನ್ನು ಪ್ರತಿಯೊಬ್ಬರು ಪಾಲಿಸಬೇಕೆಂದು ತಿಳಿಸಿದ್ದಾರೆ. ಅಲ್ಲದೆ ಪಕ್ಷಕ್ಕೆ ಮತ್ತು ನಾಯಕತ್ವಕ್ಕೆ ಮುಜುಗರ ಉಂಟು ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.