ಗೋಣಿಕೊಪ್ಪ ವರದಿ, ಜು. 7: ಸುಳುಗೋಡು ಗ್ರಾಮದ ಮುದ್ದಿಯಡ ಅನು ನಂಜಪ್ಪ ಎಂಬವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿರುವ ಘಟನೆ ನಡೆದಿದೆ.

ಎರಡು ದಿನಗಳಿಂದ ಕಾಣೆಯಾಗಿದ್ದ ಹಸು ಮಂಗಳವಾರ ಅವರ ತೋಟದಲ್ಲಿ ಪತ್ತೆಯಾಗಿದೆ. ಹಸುವಿನ ಹಿಂಭಾಗವನ್ನು ಸ್ಪಲ್ಪ ತಿಂದಿರುವ ಹುಲಿ, ಉಳಿದ ಭಾಗವನ್ನು ಬಿಟ್ಟು ತೆರಳಿದೆ. ತೋಟದಲ್ಲಿ ಹುಡುಕುವಾಗ ಹಸು ಸಾವಿಗೀಡಾಗಿರುವುದು ಅರಿವಾಗಿದೆ. ಈ ಬಗ್ಗೆ ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.

ಸೆರೆಗೆ ಒತ್ತಾಯ

ರೈತನ ಕುಟುಂಬಕ್ಕೆ ಈ ಹಸುವು ಜೀವನಾಧಾರವಾಗಿತ್ತು. ಮಾಹಿತಿ ತಿಳಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದರು.

ಘಟನಾ ಸ್ಥಳಕ್ಕೆ ಹುಣಸೂರು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಿರಣ್ ಭೇಟಿ ನೀಡಿದ ಸಂದರ್ಭ ಅರಣ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಹುಲಿ ಹಾವಳಿಯಿಂದ ಕೊಡಗಿನ ರೈತರನ್ನು ರಕ್ಷಿಸುವಂತೆ ಮನವಿ ಮಾಡಿದರು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಅರಣ್ಯ ಭವನದ ಮುಂದೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಇದೇ ಸಂದರ್ಭ ಹಸು ಕಳೆದುಕೊಂಡ ರೈತನಿಗೆ ತಾತ್ಕಾಲಿಕ ಪರಿಹಾರ ವಿತರಿಸಲಾಯಿತು.

ಈ ಸಂದÀರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಡ ಸುಭಾಷ್ ಸುಬ್ಬಯ್ಯ, ಮಾಯಮುಡಿ ಪಂಚಾಯಿತಿ ಸಂಚಾಲಕ ಪುಚ್ಚಿಮಾಡ ರಾಯ್ ಮಾದಪ್ಪ, ಕಿರುಗೂರು ರೈತ ಮುಖಂಡರಾದ ಚಪ್ಪುಡಿರ ರೋಷÀನ್, ತೀತರಮಾಡ ರಾಜ ಹಾಗೂ ಸುಳುಗೋಡು ಗ್ರಾಮದ ರೈತ ಮುಖಂಡರುಗಳು ಹಾಜರಿದ್ದರು. ಸಂಜೆಯ ವೇಳೆ ಹುಲಿ ಸೆರೆಗೆ ಅರಣ್ಯ ಇಲಾಖೆಯ ವತಿಯಿಂದ ಬೋನ್ ಇರಿಸಲಾಗಿದೆ.

-ಸುದ್ದಿಪುತ್ರ, ಹೆಚ್.ಕೆ. ಜಗದೀಶ್