ಕಣಿವೆ, ಜು. 8: ಕೊರೊನಾ ಹಿಮ್ಮೆಟ್ಟುವ ಉದ್ದೇಶದಿಂದ ಬಂದ್ ಆಗಿರುವ ವಾರದ ಸಂತೆ ವಹಿವಾಟು ಹಾಗೂ ಎಂದಿನಂತೆ ತೆರೆಯದ ಹೊಟೇಲ್ ಉದ್ಯಮ ಮತ್ತು ದೇವಾಲಯಗಳು ಕೂಡ ಸುದೀರ್ಘ ಅವಧಿಯವರೆಗೆ ಬಂದ್ ಆಗಿರುವುದರಿಂದಾಗಿ ತೆಂಗಿನಕಾಯಿ ದರ ಕುಸಿದಿದೆ ಎನ್ನಲಾಗುತ್ತಿದೆ.

ಇದರಿಂದಾಗಿ ಬೇರೆ ದಾರಿಯೇ ತೋಚದೆ ತೆಂಗಿನ ಕಾಯಿಗಳನ್ನು ಒಡೆದು ಹೋಳು ಮಾಡಿ ಅದರಿಂದ ಎಣ್ಣೆ ತೆಗೆಯಲು ಬಳಸುತ್ತಿದ್ದಾರೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಬೇಸಿಗೆ ಅವಧಿಯಲ್ಲಿ ತೆಂಗಿನ ಮರ ಗಳಲ್ಲಿನ ಎಳನೀರು ಪಾನೀಯಕ್ಕಾಗಿ ಹೆಚ್ಚು ಉಪಯೋಗ ವಾಗುವ ಕಾರಣ ಬೆಳೆಗಾರರು ಕಾಯಿಗಳಾಗುವ ಮುನ್ನವೇ ಮರದಿಂದ ಎಳನೀರನ್ನು ಮಾರಾಟ ಮಾಡುತ್ತಿದ್ದರು. ಆದರೆ ಈ ಬಾರಿಯ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕೊರೊನಾದಿಂದಾಗಿ ಆತಂಕದಿಂದ ಇಡೀ ದೇಶ ಲಾಕ್‍ಡೌನ್ ಆದ ಕಾರಣ ತೆಂಗಿನ ಮರಗಳಲ್ಲಿ ಎಳನೀರನ್ನು ಕೀಳಲು ಸಾಧ್ಯವಾಗಲಿಲ್ಲ.

ಇದೀಗ ಕಾಯಿಗಳಾಗಿ ಬೆಳೆಸಿ ಕಟಾವು ಮಾಡುತ್ತಿರುವ ಕಾರಣ ಮತ್ತೆ ವಹಿವಾಟು ಸ್ಥಗಿತಗೊಂಡಿರುವುದ ರಿಂದ ಎಂದಿನಂತೆ ಬಳಕೆಯಾಗದ ತೆಂಗಿನ ಕಾಯಿಯಿಂದಾಗಿ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಕೇವಲ ತೆಂಗು ಮಾತ್ರವಲ್ಲ. ಇದರ ಅವಲಂಬಿ ಉಪಯುಕ್ತ ಹೂಗಳ ವ್ಯಾಪಾರವೂ ಚೇತರಿಕೆ ಕಾಣದೇ ಕುಸಿದಿದೆ. ಜೊತೆಗೆ ರೈತಾಪಿಗಳು ಬೆಳೆದಿರುವ ವಿವಿಧ ತರಕಾರಿ, ಕಾಯಿಪಲ್ಯೆಗಳ ದರದ ಏರಿಕೆಯಲ್ಲೂ ಯಾವುದೇ ಪ್ರಗತಿ ಕಾಣುತ್ತಿಲ್ಲ.

ಔಷಧೀಯ ಉತ್ಪನ್ನಗಳಿಗೆ ಅತಿ ಹೆಚ್ಚು ಬಳಕೆಯಾಗುತ್ತಿದ್ದ ಪ್ರಮುಖ ವಾಣಿಜ್ಯ ಬೆಳೆ ಶುಂಠಿ ಫಸಲಿನ ದರದ ಮೇಲೂ ಕೊರೊನಾ ಅಡ್ಡಿಯಾಗಿರು ವುದು ಮಾತ್ರ ಬೆಳೆಗಾರರಲ್ಲಿ ಆತಂಕವನ್ನು ಇಮ್ಮಡಿಗೊಳಿಸಿದೆ. ಏನೇ ಆಗಲಿ ರೈತರ ಕಾಮಧೇನು ಹಾಗೂ ಕಲ್ಪವೃಕ್ಷವಾಗಿರುವ ತೆಂಗಿನ ಕಾಯಿ ಸೇರಿದಂತೆ ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೂ ದರ ಮಾತ್ರ ಕುಸಿತವಾಗಬಾರದು. -ಮೂರ್ತಿ