ಕಣಿವೆ, ಜು. 7: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದ ಕಾರಣ ಸರ್ಕಾರ ಎಲ್ಲೆಡೆ ಲಾಕ್ ಡೌನ್ ಜಾರಿಗೊಳಿಸಿತು. ಬಳಿಕ ಸಹಜವಾಗಿಯೇ ವಾರದ ಸಂತೆ ಮಾರುಕಟ್ಟೆಗಳು ಬಂದ್ ಆದವು. ಪಟ್ಟಣ ನಗರ ಪ್ರದೇಶಗಳ ಜನರೂ ಸೇರಿದಂತೆ ಗ್ರಾಮೀಣ ಪ್ರದೇಶಗಳ ಜನರು ತಮಗೆ ಅನುಕೂಲಕರವಾದ ವಾರದ ಸಂತೆಗಳಿಗೆ ತೆರಳಿ ವಾರಪೂರ ತಮಗೆ ಅನಿವಾರ್ಯವಾಗಿ ಬೇಕಿದ್ದ ತರಕಾರಿ, ಕಾಯಿ ಪಲ್ಯೆಗಳನ್ನು ಒಮ್ಮೆ ಖರೀದಿಸುತ್ತಿದ್ದರು.
ಹಾಗೆಯೇ ಮಾಂಸಾಹಾರಿಗಳು ಕೂಡ ತಮಗಿಷ್ಟವಾದ ಮಾಂಸವನ್ನು ಪಂಚಾಯಿತಿ ಪರವಾನಗಿ ಪಡೆದು ಮಾರಾಟ ಮಾಡುತ್ತಿದ್ದವರ ಬಳಿ ಖರೀದಿಸುತ್ತಿದ್ದರು. ಆದರೆ ಲಾಕ್ ಡೌನ್ ಬಳಿಕ ತರಕಾರಿ ಮಾರಾಟ ಅಂಗಡಿಗಳು ವಿಪರೀತ ಜಾಸ್ತಿಯಾದವು. ಅಂದರೆ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಲ ಕೂಡಿಗೆ, ಕೊಪ್ಪ, ಮುಳ್ಳುಸೋಗೆ ಗುಡ್ಡೆ ಹೊಸೂರು ಮೊದಲಾದ ಕಡೆಗಳಲ್ಲಿ ಎಲ್ಲಿ ನೋಡಿದರೂ ಅಲ್ಲಲ್ಲಿ ಒಂದಷ್ಟು ತರಕಾರಿ ಕಾಯಿಪಲ್ಯೆಗಳನ್ನು ಮಾರಾಟ ಮಾಡುವ ಚಿತ್ರಣವೇ ಕಾಣ ಸಿಗುತ್ತಿದೆ. ಆದರೆ ಮಾಂಸ ಮಾರಾಟ ಮಳಿಗೆಗಳು ಎಲ್ಲಿ ಹೇಗಿದ್ದವೋ ಹಾಗೆಯೇ ಇವೆ. ತರಕಾರಿ ಅಂಗಡಿಗಳು ತಲೆಎತ್ತಿವೆ. ಮಾಂಸ ಸೇವನೆ ಮಾಡುತ್ತಿದ್ದ ಜನರು ಕೊರೋನಾಕ್ಕೇನಾದರೂ ಹೆದರಿ ತರಕಾರಿ ತಿನ್ನೋಕೆ ಆರಂಭಿಸಿಬಿಟ್ರಾ ? ಎಂಬ ಪ್ರಶ್ನೆ ಕಾಡುತ್ತಿದೆ.
ಬೇರೆ ಬೇರೆ ವ್ಯವಹಾರ ವ್ಯಾಪಾರ ಮಾಡು ತ್ತಿದ್ದ ಮಂದಿ ಜೀವನೋಪಾಯಕ್ಕಾಗಿ ಹೀಗೆ ತರಕಾರಿ ಮಾರಾಟ ಅಂಗಡಿಗಳನ್ನು ತೆರೆದುಕೊಂಡು ಬಿಟ್ರಾ ? ಇನ್ನು ಗ್ರಾಮೀಣ ಪ್ರದೇಶಗಳ ಮನೆ ಬಾಗಿಲಿಗೂ ಆಟೋ, ಗೂಡ್ಸ್ ವಾಹನಗಳಲ್ಲಿಯೂ ತೆರಳಿ ತರಕಾರಿ ಕಾಳು ಕಡ್ಡಿ ಮಾರಾಟ ಮಾಡುವ ಚಿತ್ರಣಗಳು ಕಂಡು ಬರುತ್ತಿವೆ. ತರಕಾರಿ ಮಾರಾಟ ಮಳಿಗೆಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆದುಕೊಂಡರೂ ಕೂಡ ಯಾವುದೇ ತರಕಾರಿಗಳದ್ದು ಮಾತ್ರ ದರ ಕಡಿಮೆ ಮಾಡಿಲ್ಲ. ಉದಾಹರಣೆಗೆ ಕುಶಾಲನಗರ ಸುತ್ತಮುತ್ತ ಬಹಳಷ್ಟು ರೈತರು ಹಸಿಮೆಣಸಿನ ಕಾಯಿ ಬೆಳೆದಿದ್ದಾರೆ.
ಆದರೆ ರೈತರು ಕಷ್ಟಪಟ್ಟು ಬೆಳೆದು ತಂದ ಹಸಿಮೆಣಸಿನ ಕಾಯಿಗೆ ಈ ವ್ಯಾಪಾರಸ್ಥರು ಕೆಜಿ ಯೊಂದಕ್ಕೆ ತಲಾ 15 ರಿಂದ 20 ರೂ ಗೆ ಖರೀದಿಸುತ್ತಾರೆ. ಇನ್ನೊಂದು ಎರಡು ರೂ ಸೇರಿಸಿಕೊಡಿ ಎಂದು ರೈತ ವ್ಯಾಪಾರಿಗಳಲ್ಲಿ ಕೇಳಿದರೆ ಅಯ್ಯೋ ಲಾಕ್ ಡೌನ್ ವ್ಯಾಪಾರವೇ ಇಲ್ಲ ಎಂದು ಹೇಳಿ ಕಳಿಸುವ ವ್ಯಾಪಾರಸ್ಥರು ಅದೇ ಹಸಿ ಮೆಣಸಿನ ಕಾಯಿಯನ್ನು ಗರಿಷ್ಠ 40 ರೂಗೆ ಮಾರಾಟ ಮಾಡುತ್ತಾರೆ. ಹೀಗೆ ಇತರೇ ತರಕಾರಿ ಕಾಯಿ ಪಲ್ಯೆಗಳನ್ನು ತಿಂಗಳುಗಟ್ಟಲೇ ಬೆಳೆವ ರೈತರಿಗಿಂತ ಕುಳಿತಲ್ಲೇ ವ್ಯಾಪಾರ ಮಾಡುವ ಮಂದಿ ಹೆಚ್ವಿನ ಲಾಭ ಗಳಿಸುತ್ತಾರೆ. ಅದಕ್ಕೇನೆ ಕೊರೊನಾ ಲಾಕ್‍ಡೌನ್ ಹೆಸರಲ್ಲಿ ಎಲ್ಲೆಲ್ಲೂ ತರಕಾರಿ ಅಂಗಡಿಗಳು.....! ಆದರೂ, ರೈತರು ಬೆಳೆದ ಬೆಳೆ ನೆಲಪಾಲಾಗದೆ ಜನ ಬಳಸುತ್ತಾರಲ್ಲಾ; ಅದೇ ತೃಪ್ತಿ.
- ಕೆ.ಎಸ್. ಮೂರ್ತಿ