ವೀರಾಜಪೇಟೆ, ಜು. 8: ಕೊರೊನಾ ಮಹಾಮಾರಿಯಿಂದ ತತ್ತರಿಸಿರುವ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಜಿಲ್ಲೆಗೆ ಮರಳುತ್ತಿರುವವರು ಕೊರೊನಾ ಸೋಂಕು ಹರಡದಂತೆ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬುದಕ್ಕೆ ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೆರುಂಬಾಡಿಯ ಸೋಂಕಿತ ಕುಟುಂಬವೊಂದು ಮಾದರಿಯಾಗಿದ್ದಾರೆ.

ಜೂನ್ 29 ರಂದು ತನ್ನ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಿಂದ ಬಾಡಿಗೆ ಕಾರಿನಲ್ಲಿ ಜಿಲ್ಲೆಯ ಪೆರುಂಬಾಡಿಯ ಮನೆಗೆ ಬಂದಿದ್ದಾರೆ. ಬೆಂಗಳೂರಿನಿಂದ ಹೊರಡುತ್ತಿದ್ದಂತೆ ಮನೆಯಲ್ಲಿದ್ದ ತಾಯಿ ಸೇರಿದಂತೆ ಕುಟುಂಬದ ಇತರ ಸದಸ್ಯರನ್ನು ಪಕ್ಕದಲ್ಲಿರುವ ತಂಗಿ ಮನೆಗೆ ತೆರಳುವಂತೆ ಸೂಚಿಸಿದ್ದರು. ಜೂನ್ 29 ರಂದು ರಾತ್ರಿ ಮನೆಗೆ ತಲುಪಿದ ನಾಲ್ಕು ಮಂದಿಯ ಪೈಕಿ ದಂಪತಿಗಳಿಗೆ ಜ್ವರ ಕಾಣಿಸಿಕೊಂಡ ಪರಿಣಾಮ ಆರೋಗ್ಯ ತಪಾಸಣೆ ನಡೆಸುವುದು ಅನಿವಾರ್ಯವಾಗಿತ್ತು. ಆಸ್ಪತ್ರೆಗೆ ತೆರಳಲು ಇವರ ಬಳಿ ಸ್ವಂತ ವಾಹನ ಇರಲಿಲ್ಲ. ಬಾಡಿಗೆ ವಾಹನದಲ್ಲಿ ಆಸ್ಪತ್ರೆಗೆ ತೆರಳಿದರೆ ಕೋವಿಡ್ ಪರೀಕ್ಷಾ ವರದಿಯಲ್ಲಿ ಒಂದು ವೇಳೆ ಸೋಂಕು ದೃಢ ಪಟ್ಟರೆ ಚಾಲಕನಿಂದ ಮತ್ತಷ್ಟು ಸಮಸ್ಯೆಯಾಗಲಿದೆ ಎಂಬ ಸಾಮಾಜಿಕ ಕಳಕಳಿಯಿಂದ ಆರೋಗ್ಯ ಇಲಾಖೆಯ ಮೂಲಕ ವಾಹನದ ವ್ಯವಸ್ಥೆ ಮಾಡಿಕೊಡುವಂತೆ ನನ್ನಲ್ಲಿ ಮನವಿ ಮಾಡಿಕೊಂಡರು. ಖಾಸಗಿ ಆಂಬ್ಯುಲನ್ಸ್‍ಗಾಗಿ ವೀರಾಜಪೇಟೆ ಸುತ್ತಮುತ್ತಲಿನ ಹಲವರಲ್ಲಿ ವಿಚಾರಿಸಿದರೂ ಫಲ ಸಿಗಲಿಲ್ಲ. ವಿಚಾರವನ್ನು ಮಾಧ್ಯಮ ಸ್ಪಂದನ ತಂಡದ ಪ್ರಮುಖರು ಹಾಗೂ ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರ ಗಮನಕ್ಕೆ ತರಲಾಯಿತು. ಈ ನಡುವೆ ಕುಟುಂಬದ ಸದಸ್ಯರು 108ಕ್ಕೆ ಕರೆ ಮಾಡಿದ್ದರು. ಕೆಲವು ತಾಸುಗಳ ನಂತರ ಆಂಬ್ಯುಲನ್ಸ್ ಸ್ಥಳಕ್ಕೆ ತಲುಪಿದರೂ ಕೊರೊನಾ ಸೋಂಕಿನ ಲಕ್ಷಣ ಇರುವವರನ್ನು ಕರೆದೊಯ್ಯಲು ನಮಗೆ ಯಾವುದೇ ಆದೇಶ ಇಲ್ಲ ಎಂದು ಚಾಲಕ ತಿಳಿಸಿದರು. ಕೂಡಲೇ ರಮೇಶ್ ಕುಟ್ಟಪ್ಪ ಅವರು ತಾಲೂಕು ವೈದ್ಯಾಧಿಕಾರಿ ಡಾ. ಯತೀರಾಜ್ ಅವರನ್ನು ಸಂಪರ್ಕಿಸಿ ಘಟನೆಯ ಬಗ್ಗೆ ವಿವರಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ವೈದ್ಯಾಧಿಕಾರಿ ಅದೇ ಆಂಬ್ಯುಲನ್ಸ್ ಮೂಲಕ ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಚಾಲಕನಿಗೆ ಸೂಚಿಸಿದರು. ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಕುಟುಂಬದ ನಾಲ್ಕು ಮಂದಿಯ ಕೋವಿಡ್ ಪರೀಕ್ಷೆಯ ನಂತರ ಆಂಬ್ಯುಲನ್ಸ್ ಮೂಲಕ ಮನೆಗೆ ವಾಪಸ್ ಬಿಡಲಾಯಿತು. ನಂತರದ ದಿನಗಳಲ್ಲಿ ಈ ಕುಟುಂಬವು ಮನೆಯಲ್ಲೇ ಉಳಿದುಕೊಂಡಿತ್ತು.

ಇದೀಗ 8 ದಿನಗಳ ನಂತರ ಕುಟುಂಬದ ಕೋವಿಡ್ ಫಲಿತಾಂಶ ಹೊರ ಬಂದಿದ್ದು ನಾಲ್ಕು ಮಂದಿಯಲ್ಲೂ ಸೋಂಕು ಪತ್ತೆಯಾಗಿದೆ.

ಈ ಕುಟುಂಬವು ತನ್ನ ಸಂಬಂಧಿಕರ ಜೊತೆಯಾಗಲಿ, ಊರಿನ ಜನರೊಂದಿಗಾಗಲಿ ಯಾವುದೇ ಸಂಪರ್ಕವನ್ನು ಹೊಂದಿಲ್ಲ. ಮನೆಯಿಂದ ಹೊರಗೆ ಬರಲೂ ಇಲ್ಲ. ಯಾವುದೇ ಆತಂಕಕ್ಕೆ ಒಳಗಾಗದೆ ಬಹಳ ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯುತವಾಗಿ ಸಾಮಾಜಿಕ ಕಳಕಳಿಯಿಂದ ನಡೆದುಕೊಂಡಿರುವುದರಿಂದ ಸಾರ್ವಜನಿಕರು ಕುಟುಂಬದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಗೆ ಆಗಮಿಸುತ್ತಿರುವ ಪ್ರತಿಯೊಬ್ಬರೂ ಈ ಕುಟುಂಬವನ್ನು ಮಾದರಿಯಾಗಿ ಕೊರೊನಾ ವಿರುದ್ಧ ಹೋರಾಡಿದರೆ ಕೊಡಗು ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಕೊರೊನಾ ಮಹಾಮಾರಿಯ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

- ಮುಸ್ತಫ ಸಿದ್ದಾಪುರ