ಕೊಡ್ಲಿಪೇಟೆ, ಜು. 7: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕು ಕೃಷಿ ಯಂತ್ರಧಾರೆ ಕೇಂದ್ರದ ವತಿಯಿಂದ ಕೊಡ್ಲಿಪೇಟೆ ಮಹಿಳಾ ಸಮಾಜದಲ್ಲಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಯಂತ್ರ ಚಾಲಕರಿಗೆ ತರಬೇತಿ ಕಾರ್ಯಾಗಾರ ಮತ್ತು ಯಾಂತ್ರೀಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಡಾ.ಯೋಗೇಶ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಯಂತ್ರೋಪಕರಣಗಳ ಮೂಲಕ ಕೃಷಿ ಚಟುವಟಿಕೆ ನಡೆಸುವ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ್, ಕೊಡ್ಲಿಪೇಟೆಯ ಪ್ರಗತಿಪರ ಕೃಷಿಕ ಭಗವಾನ್‍ಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಕೃಷಿ ಯಂತ್ರಧಾರೆಯ ಪ್ರಾದೇಶಿಕ ಸಮನ್ವಯ ಅಧಿಕಾರಿ ಉಮೇಶ್ ಪೂಜಾರಿ, ಕೊಡ್ಲಿಪೇಟೆ ಸೇವಾ ಕೇಂದ್ರದ ಪ್ರಬಂಧಕ ಅಭಿಷೇಕ್, ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್, ಸಮಾಜ ಸೇವಕ ಇಂದ್ರೋಜಿರಾವ್, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರೋಹಿಣಿ ಸುಬ್ರಮಣ್ಯ, ಸೋಮವಾರಪೇಟೆ ಕೃಷಿ ಅಧಿಕಾರಿ ಗೀತ, ವೀರಾಜಪೇಟೆ ಕೃಷಿ ಅಧಿಕಾರಿ ಚೇತನ್ ಹಾಜರಿದ್ದರು.

ಕೊಡ್ಲಿಪೇಟೆ ಸಮೀಪದ ಮಳಲಿ ಗ್ರಾಮದ ಪ್ರವೀಣ್ ಎಂಬವರ ಗದ್ದೆಯಲ್ಲಿ ಯಾಂತ್ರಿಕೃತ ಭತ್ತದ ನಾಟಿಯ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.

ಹಾಸನದ ಕ್ಯೂಬೋಟೋ ಸಂಸ್ಥೆಯ ಸತೀಶ್ ಯಂತ್ರದಲ್ಲಿ ನಾಟಿ ಮಾಡುವ ಬಗ್ಗೆ ಚಾಲಕರಿಗೆ ಮತ್ತು ಪಾಲ್ಗೊಂಡಿದ್ದ ರೈತರಿಗೆ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಸೋಮವಾರಪೇಟೆ, ಮಡಿಕೇರಿ, ವೀರಾಜಪೇಟೆ, ಪಿರಿಯಾಪಟ್ಟಣ ಮತ್ತು ಅರಕಲಗೂಡು ತಾಲೂಕು ಸೇವಾ ಕೇಂದ್ರದ 40 ಮಂದಿ ಯಂತ್ರ ಚಾಲಕರು ಭಾಗವಹಿಸಿದ್ದರು.

ವರದಿ: ಧರ್ಮ