ಮಡಿಕೇರಿ, ಜು. 8: ಜೀಪು ಮತ್ತು ಪಿಕಪ್ ವಾಹನ ಖರೀದಿಗಾಗಿ ರೈತರು ಪಡೆಯುವ ಸಾಲವನ್ನು ಶೇ. 3ರ ಮಧ್ಯಮಾವಧಿ ಕೃಷಿ ಸಾಲದ ರಿಯಾಯಿತಿ ಬಡ್ಡಿ ದರದ ಸಾಲ ಯೋಜನೆಯ ವ್ಯಾಪ್ತಿಗೆ ಒಳಪಡಿಸುವದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಮೂಲಕ ರಾಜ್ಯ ಸಹಕಾರ ಸಚಿವರ ಗಮನಕ್ಕೆ ತರಲಾಗಿದೆ.

ತಾ. 2 ರಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಡಿಸಿಸಿ ಬ್ಯಾಂಕ್‍ಗೆ ಭೇಟಿ ನೀಡಿದ್ದ ಸಂದರ್ಭ ಬ್ಯಾಂಕ್‍ನ ಅಧ್ಯಕ್ಷ ಬಾಂಡ್ ಗಣಪತಿ ಶಾಸಕ ಕೆ.ಜಿ. ಬೋಪಯ್ಯ ಅವರೊಂದಿಗೆ ಹಲವು ಪ್ರಮುಖ ಬೇಡಿಕೆಗಳ ಬಗ್ಗೆ ಸಚಿವರ ಗಮನ ಸೆಳೆದು ಈ ಬಗ್ಗೆ ಸ್ಪಂದಿಸಲು ಮನವಿ ಸಲ್ಲಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸೋಮಶೇಖರ್ ಅವರು ಈ ಕುರಿತಾಗಿ ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

ಪ್ರಮುಖ ಬೇಡಿಕೆಗಳು

ಸಹಕಾರ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿರುವ ಪ್ರಮುಖ ಬೇಡಿಕೆಗಳು ಇಂತಿವೆ.

* ರಾಜ್ಯಮಟ್ಟದ ತಾಂತ್ರಿಕ ಸಮಿತಿಯ ಬೆಳೆವಾರು ಸ್ಕೇಲ್ ಆಫ್ ಫೈನಾನ್ಸ್ ಇನ್ನೂ ನಿಗದಿಯಾಗದಿರುವದು.

* ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಜೀಪು - ಪಿಕಪ್ ವಾಹನ ಸಾಲವನ್ನು ಶೇ. 3ರ ಬಡ್ಡಿ ವ್ಯಾಪ್ತಿಗೆ ತರುವದು.

* 2019-20ನೇ ಸಾಲಿನಲ್ಲಿ ಶೇ. 3ರ ಬಡ್ಡಿ ದರದಲ್ಲಿ ವಿತರಿಸಿದ ಮಾಧ್ಯಮಾವಧಿ ಕೃಷಿ ಸಾಲಗಳಿಗೆ ರಾಜ್ಯ ಸರಕಾರ ಒದಗಿಸಿಕೊಡಲಿರುವ ವ್ಯತ್ಯಾಸದ ಬಡ್ಡಿ ಸಹಾಯಧನ ದರ ನಿಗದಿ.

* ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ನಿವಾರಣೆ

* 2017-18 ರ ಅಲ್ಪಾವಧಿ ಬೆಳೆ ಸಾಲ ಮನ್ನಾ ಯೋಜನೆಯಡಿ ಬಾಕಿ ಇರುವ ಮೊತ್ತದ ಶೀಘ್ರ ಬಿಡುಗಡೆ.

* ಡಿಸಿಸಿ ಬ್ಯಾಂಕ್‍ಗೆ ಖಾಯಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಕಾತಿ.

* 2017-18 ಸಾಲಿಗೆ ಪಶುಭಾಗ್ಯ ಯೋಜನೆಯಡಿ ಶೂನ್ಯ ಬಡ್ಡಿ ದರದಲ್ಲಿ ವಿತರಿಸಿ ವಸೂಲಾದ ಸಾಲಗಳಿಗೆ ಬಡ್ಡಿ ಸಹಾಯಧನ ಒದಗಿಸಿಕೊಡುವದು.